ಮೈಸೂರು: ನಗರದ ಅರಮನೆ ಎದುರು ವ್ಯಕ್ತಿಯೊಬ್ಬರು ತಮ್ಮ ವ್ಯಾಪಾರದ ಜೊತೆ ಇತರರಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುತ್ತಾ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರು ಸ್ವಚ್ಛತೆಯಲ್ಲಿ ಹೆಸರುವಾಸಿಯಾಗಿದ್ದು ಇಲ್ಲಿನ ಜನರು, ವ್ಯಾಪಾರಸ್ಥರು ಹಾಗೂ ಪ್ರತಿಯೊಬ್ಬರು ಸ್ವಚ್ಛತೆಯನ್ನು ಒಂದಲ್ಲಾ ಒಂದು ರೀತಿ ಕಾಪಾಡಿಕೊಂಡು ಬರುತ್ತಿದ್ದಾರೆ. ಅಂತೆಯೇ ನಗರದ ಕಲ್ಲಂಗಡಿ ಹಣ್ಣಿನ ವ್ಯಾಪಾರಿಯಾದ ಪುಟ್ಟ ಎನ್ನುವವರು ತಮ್ಮ ವ್ಯಾಪಾರದೊಂದಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅರಮನೆಯ ಎದುರು ಕಲ್ಲಂಗಡಿ ಹಣ್ಣಿನ ವ್ಯಾಪಾರ ಮಾಡುತ್ತಾ ಬಂದವರಿಗೆ ಹಣ್ಣು ಕತ್ತರಿಸಿ ಕೊಟ್ಟು, ಕತ್ತರಿಸಿದ ಹಣ್ಣನ್ನು ರಸ್ತೆಯ ಅಕ್ಕಪಕ್ಕದಲ್ಲಿ ಎಸೆಯದೆ ತಮ್ಮ ತಳ್ಳುಗಾಡಿಯಲ್ಲೇ ಇಟ್ಟುಕೊಂಡು ಸ್ವಚ್ಚತೆ ಕಾಪಾಡಿಕೊಂಡು ಬಂದಿದ್ದಾರೆ. ಜೊತೆಗೆ ಅಂಗಡಿಗೆ ಬಂದವರಿಗೂ ಸಹ ಇದರ ಬಗ್ಗೆ ಅರಿವು ಮೂಡಿಸುತ್ತಿದ್ದು, ಆ ಹಣ್ಣಿನ ಸಿಪ್ಪೆಯನ್ನು ಹಸುಗಳಿಗೆ ನೀಡುತ್ತಾರೆ. ಇಲ್ಲವಾದರೆ ಗೊಬ್ಬರಕ್ಕೆ ಉಪಯೋಗವಾಗುತ್ತದೆ ಎಂದು ತಿಳಿಸುತ್ತಾರೆ.
ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸರ್ಕಾರ ಹಾಗೂ ಪಾಲಿಕೆಯವರು ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾರೆ. ಆದರೆ ಇಂತಹ ವ್ಯಾಪಾರಿಗಳು ತಮ್ಮ ಕೆಲಸದ ಜೊತೆಯಲ್ಲೇ ಸ್ವಚ್ಚತೆಯ ಅರಿವು ಮೂಡಿಸುತ್ತಿರುವುದು ಸಂತಸದ ಸುದ್ದಿ.