ಮೈಸೂರು: ತಪಾಸಣೆಗೆಂದು ಆಸ್ಪತ್ರೆಗೆ ಬಂದಿದ್ದ ಮಹಿಳೆಯೊಬ್ಬರ ಚಿನ್ನದ ಸರವನ್ನು, ವ್ಯಕ್ತಿಯೋರ್ವ ಕಿತ್ತುಕೊಂಡು ಪರಾರಿಯಾದ ಘಟನೆ ಕುವೆಂಪುನಗರದ ಅಪೋಲೋ ಆಸ್ಪತ್ರೆಯಲ್ಲಿ ನಡೆದಿದೆ.
ಸೋಮವಾರ ಸಾಯಂಕಾಲ ಹೆಚ್.ಡಿ ಕೋಟೆಯ ನಿವಾಸಿ ಸುಜಾತಾ ಎಂಬವರು ತಲೆ ಸುತ್ತು, ವಾಂತಿ ಎಂದು ಅಪೋಲೋ ಆಸ್ಪತ್ರೆಗೆ ತಪಾಸಣೆಗೆ ಬಂದಿದ್ದರು. ತಪಾಸಣೆ ನಡೆಸಿದ ವೈದ್ಯರು ಬ್ಲಡ್ ಚೆಕ್ ಅಪ್ ಮಾಡಿಸಿಕೊಳ್ಳಲು ಹೇಳಿದ್ದು, ಅದಕ್ಕಾಗಿ ಆಸ್ಪತ್ರೆಯ ಕಾರಿಡಾರ್ ನಲ್ಲಿ ಸುಜಾತ ಕಾಯುತ್ತ ಕುಳಿತಿದ್ದರು. ಬಳಿಕ ಆಸ್ಪತ್ರೆಯ ಸಿಬ್ಬಂದಿ ಧರಿಸುವ ನೀಲಿ ಶರ್ಟ್ ಧರಿಸಿ, ಶೂ ಹಾಕಿದ್ದ ವ್ಯಕ್ತಿಯೋರ್ವ ಬಂದು ಇಲ್ಲಿ ಯಾಕೆ ಕುಳಿತಿದ್ದೀರಿ, ಒಳಗಡೆ ಎಮರ್ಜೆನ್ಸಿಯಲ್ಲಿ ಮಲಗಿ ಅಂತ ಹೇಳಿ ಅವರನ್ನು ಒಳಗೆ ಬಿಟ್ಟಿದ್ದಾನೆ. ನಂತರ ನಿಮ್ಮ ಕತ್ತಿನಲ್ಲಿರುವ ಸರ ನನ್ನ ಬಳಿ ತೆಗೆದುಕೊಡಿ ಎಂದು ಹೇಳಿದಾಗ, ಹೊರಗಡೆ ನಮ್ಮ ತಾಯಿ ಕುಳಿತಿದ್ದಾರೆ. ಅವರನ್ನು ಒಳಗೆ ಕರೆಯಿರಿ ಎಂದು ಹೇಳೀದ ಕೂಡಲೆ, ಆ ವ್ಯಕ್ತಿ ಕತ್ತಿನಲ್ಲಿದ್ದ 32ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ.
ವೈದ್ಯರು, ಸಿಬ್ಬಂದಿ ಅಲ್ಲೇ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಅಶೋಕಪುರಂ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಶೋಕಪುರಂ ಠಾಣೆಯ ಇನ್ಸ್ಪೆಕ್ಟರ್ ಅನಂತಪದ್ಮನಾಭ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸಿಸಿ ಟಿವಿ ಫುಟೇಜ್ ಚೆಕ್ ಮಾಡಿದ್ದು, ವ್ಯಕ್ತಿಯ ಚಲನವಲನ ಕಂಡು ಬಂದಿದೆ ಎನ್ನಲಾಗಿದ್ದು, ವ್ಯಕ್ತಿಯ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.