ಮೈಸೂರು/ಚಾಮರಾಜನಗರ: ಇಂದು ಮಧ್ಯಾಹ್ನ 3 ಗಂಟೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ 5 ದಿನದ ಹಸುಗೂಸನ್ನ ಅಪಹರಿಸಿದ್ದ ದಂಪತಿಯನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ.
ಹುಣಸೂರು ಪಟ್ಟಣದ ಮಾರಿಗುಡಿ ಬೀದಿಯ ವಸಂತ ಮತ್ತು ರಂಜಿತ ಬಂಧಿತ ದಂಪತಿ. ರಂಜಿತಾಗೆ 6 ತಿಂಗಳ ಹಿಂದೆ ಗರ್ಭಪಾತವಾಗಿದ್ದು, ಭವಿಷ್ಯದಲ್ಲಿ ಮಗುವಾಗುವುದಿಲ್ಲ ಎಂದು ವೈದ್ಯರು ಹೇಳಿದ್ದರು. ಇದರಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಬಂದು ಹೊಂಚುಹಾಕಿ ಮುತ್ತುರಾಜಮ್ಮ ಎಂಬುವವರ ಮಗುವನ್ನು ಹೊತ್ತೊಯ್ದಿದ್ದಾಳೆ. ಆಕೆ ಮಕ್ಕಳ ಕಳ್ಳಿಯಲ್ಲ ಎಂದು ಚಾಮರಾಜನಗರ ಪಟ್ಟಣ ಠಾಣೆ ಪಿಐ ನಾಗೇಗೌಡ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಸದ್ಯ ಮಗುವನ್ನ ಹುಣಸೂರು ಪಟ್ಟಣದ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದ್ದು, ಈ ಸಂಬಂಧ ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.