ಮೈಸೂರು: ಚಾಮುಂಡಿ ಬೆಟ್ಟದಲ್ಲಿರುವ 400 ವರ್ಷಗಳ ಪುರಾತನ ಏಕಶಿಲೆ ನಂದಿ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡವೊಂದು ಸ್ಥಳ ಪರಿಶೀಲಿಸಿದೆ.
ಪುರಾತತ್ವ ಇಲಾಖೆ ಹಿರಿಯ ಅಧಿಕಾರಿ ಆರ್.ಗೋಪಾಲ್ ನೇತೃತ್ವದ ತಂಡದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಹಾಗೂ ತಜ್ಞರು, ಏಕಶಿಲೆಯಲ್ಲಿ ನಂದಿ ವಿಗ್ರಹವು 1659-73 ರಲ್ಲಿ ನಿರ್ಮಾಣ ಗೊಂಡಿತ್ತು. 400 ವರ್ಷಗಳ ಹಳೆಯದಾಗಿದ್ದು ಕಾರ್ತಿಕ ಮಾಸ ಸಮಯದಲ್ಲಿ ಎರಡು ಬಾರಿ ಮಹಾಮಜ್ಜನವಾಗಿದೆ. ನಂದಿ ವಿಗ್ರಹದ ಕಾಲು, ಕತ್ತು ಹಾಗೂ ಮುಖದ ಕೆಲವೆಡೆ ಬಿರುಕು ಕಾಣಿಸಿಕೊಂಡಿದ್ದು, ಕಪ್ಪಾಗಿದ್ದ ನಂದಿ ವಿಗ್ರಹವನ್ನ ಪಾಲಿಶ್ ಮಾಡಿಸಲಾಗಿತ್ತು. ಈ ವೇಳೆ ವೈಜ್ಞಾನಿಕವಾಗಿ ಸಂರಕ್ಷಣೆ ಮಾಡದ ಹಿನ್ನೆಲೆಯಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಈ ಸಂಬಂಧ ಪುರಾತತ್ವ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಪಾರಂಪರಿಕ ತಜ್ಞರ ಸಮಿತಿಯೊಂದನ್ನ ರಚಿಸಿ ವಿಗ್ರಹ ಪರಿಶೀಲನೆಗೆ ಸೂಚಿಸಲಾಗಿತ್ತು. ಅದರಂತೆ ಅಧಿಕಾರಿಗಳ ತಂಡ ವಿಗ್ರಹ ಪರಿಶೀಲನೆ ನಡೆಸಿ ಬಿರುಕು ಮುಚ್ಚಲು ಯೋಜನೆ ರೂಪಿಸುತ್ತಿದೆ.
ದೊಡ್ಡ ದೇವರಾಜ ಒಡೆಯರ್ ಆಡಳಿತಾವಧಿಯಲ್ಲಿ (1659) 1000 ಮೆಟ್ಟಿಲುಗಳನ್ನು ಮತ್ತು ಶಿವನಿಗೆ ಇಷ್ಟವಾದ ನಂದಿಯ ಬಹುದೊಡ್ಡ ವಿಗ್ರಹವನ್ನು ನಿರ್ಮಿಸಲಾಗಿತ್ತು. ಈ ವಿಗ್ರಹವು 16 ಅಡಿ (4.8 ಮೀಟರ್) ಮುಂಭಾಗ ಮತ್ತು 25 ಅಡಿ (7.5 ಮೀ) ಉದ್ದವಿರುತ್ತದೆ. ಈ ನಂದಿ ವಿಗ್ರಹಕ್ಕೆ ಬಹು ದೊಡ್ಡ ಮತ್ತು ಆಕರ್ಷಣೆಯಿಂದ ಕೂಡಿದ ಘಂಟೆಗಳನ್ನು ಇದರ ಕುತ್ತಿಗೆ ಭಾಗದಲ್ಲಿ ನಿರ್ಮಿಸಲಾಗಿದೆ.