ಮಂಗಳೂರು: ಕೊರೊನಾ, ನೆರೆ ಬಾಧೆಯ ನಡುವೆಯೂ ಈ ಬಾರಿ ಲೋಕೋಪಯೋಗಿ ಇಲಾಖೆಗೆ 8,400 ಕೋಟಿ ರೂ. ಅನುದಾನ ದೊರಕಿದ್ದು, ಡಿಸೆಂಬರ್ ಅಂತ್ಯಕ್ಕೆ 5,179 ಕೋಟಿ ರೂ. ಖರ್ಚು ಮಾಡಿ ಸುಮಾರು 61 ಪ್ರತಿಶತ ಪ್ರಗತಿ ಸಾಧಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ, ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಹೇಳಿದರು.
ನಗರದ ಅತ್ರಾಡಿ ರಾಜ್ಯ ಹೆದ್ದಾರಿ ನಂ.67ರ 12.98 ಕಿ.ಮೀ.ನಿಂದ 14.80 ಕಿ.ಮೀ.ವರೆಗೆ 50 ಕೋಟಿ ರೂ. ಅಂದಾಜು ಮೊತ್ತದಲ್ಲಿ ನಿರ್ಮಾಣಗೊಳ್ಳಲಿರುವ ಚತುಷ್ಪಥ ರಸ್ತೆ, ಫಲ್ಗುಣಿ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಹೆಚ್ಚಿನ ಕಾಮಗಾರಿ ಅನುಷ್ಠಾನಗೊಳಿಸಲು ತೊಂದರೆಯಾದರೂ ನಡೆಯುತ್ತಿರುವ ಕಾಮಗಾರಿಗಳಿಗೆ ಅನುದಾನದ ಕೊರತೆ ಮಾಡಲಿಲ್ಲ ಎಂದು ಹೇಳಿದರು.
ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ಈವರೆಗೆ ಸುಮಾರು 6,570 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ಅದಲ್ಲದೆ 322 ಸೇತುವೆಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಶಿವಮೊಗ್ಗ ಹಾಗೂ ವಿಜಯಪುರದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಅಭಿವೃದ್ಧಿ ಪಥದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸಾಕಷ್ಟು ಕಾಮಗಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮುಂದಿನ ಎರಡೂವರೆ ವರ್ಷದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ ಕಾರ್ಯಗಳು ನಡೆಸಬೇಕೆಂದು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಅತಿವೃಷ್ಟಿ, ನೆರೆ ಹಾಗೂ ಕೊರೊನಾದಿಂದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿತ್ತು. ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಿನ ಅನುದಾನ ನೀಡಲೂ ತೊಂದರೆಯಾಗಿತ್ತು. ಅದಾಗ್ಯೂ 2019-20ರ 9 ಸಾವಿರ ಕೋಟಿ ರೂ. ಬಜೆಟ್ನಲ್ಲಿ 8,788 ಸಾವಿರ ಕೋಟಿ ರೂ. ಅನುದಾನ ನೀಡಿ ಸುಮಾರು 97 ಪ್ರತಿಶತ ಪ್ರಗತಿ ಸಾಧಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, ಕಳೆದ ಬಾರಿ ದ.ಕ ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ 8 ಶಾಸಕರಲ್ಲಿ ಅಂಗಾರ ಓರ್ವರೇ ಬಿಜೆಪಿ ಶಾಸಕರಿದ್ದು, ನಾನೋರ್ವ ಸಂಸದನಿದ್ದೆ. ಹೊಡೆದಾಟ ಬಡಿದಾಟಗಳ ಮಧ್ಯೆ ಅಭಿವೃದ್ಧಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಬಿಜೆಪಿಯಲ್ಲಿ ಏಳು ಶಾಸಕರಿದ್ದು, ನಮ್ಮ ಕೈ ಬಲಪಡಿಸಿ ಹಗಲು-ರಾತ್ರಿ ದುಡಿದು ಅಭಿವೃದ್ಧಿಯ ಮಹಾಪೂರವನ್ನೇ ತರುತ್ತಿದ್ದಾರೆ ಎಂದು ಹೇಳಿದರು.
ಫಲ್ಗುಣಿ ಸೇತುವೆ ಎರಡು ವರ್ಷದೊಳಗೆ ಪೂರ್ಣ:
ಇಂದು ಶಿಲಾನ್ಯಾಸಗೊಂಡಿರುವ ಚತುಷ್ಪಥ ರಸ್ತೆ, ಫಲ್ಗುಣಿ ನದಿಗೆ ಸೇತುವೆ ನಿರ್ಮಾಣ ಎರಡು ವರ್ಷದೊಳಗೆ ಪೂರ್ತಿಗೊಳಿಸಿ ಲೋಕಾರ್ಪಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗುರುಪುರ ಸೇತುವೆ ಕಾಮಗಾರಿಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಿರುವ ಮುಗ್ರೋಡಿ ಕನ್ಸ್ಟ್ರಕ್ಷನ್ನವರಿಗೆ ಈ ಸೇತುವೆಯ ಕಾಮಗಾರಿಯನ್ನು ನೀಡಲಾಗಿದೆ. ಅವಧಿಗಿಂತ ಮೊದಲೇ ಇದರ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.