ಮಂಗಳೂರು (ದ.ಕ): ರಾಜ್ಯ ಸರ್ಕಾರ ಆರ್ಟಿಇ (Right education act)ಗೆ ಅರ್ಜಿ ಆಹ್ವಾನಿಸಿದೆ. ಆದರೆ ವಲಸೆ ಕಾರ್ಮಿಕರು, ಕಡಿಮೆ ಸಂಬಳ ಪಡೆಯುವವರು ಈಗಾಗಲೇ ತಮ್ಮ ತಮ್ಮ ಊರುಗಳಿಗೆ ವಲಸೆ ಹೋಗಿರುವ ಈ ಸಂದರ್ಭದಲ್ಲಿ ಯಾರಿಗಾಗಿ ಈ ಅರ್ಜಿ ಆಹ್ವಾನ ಮಾಡಲಾಗಿದೆ. ತಕ್ಷಣ ಇದನ್ನು ಸರಕಾರ ಹಿಂಪಡೆಯಲಿ ಎಂದು ಐವನ್ ಡಿಸೋಜ ಒತ್ತಾಯಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ. ಯಾಂತ್ರಿಕವಾಗಿ ತನ್ನ ಕೆಲಸ ನಡೆಸುತ್ತಿದೆ. ಆದ್ದರಿಂದ ಕಡ್ಡಾಯ ಶಿಕ್ಷಣಕ್ಕಾಗಿ ಅರ್ಜಿ ಹಾಕುವ ಅಲೆಮಾರಿಗಳು, ಕಟ್ಟಡ ಕಾರ್ಮಿಕರು ಅವರವರ ಊರಿಗೆ ಹೋಗಿರುವ ಈ ಸಂದರ್ಭ ಆರ್ ಟಿಇ ಅರ್ಜಿ ಆಹ್ವಾನಿಸಿದೆ.
ಸರ್ಕಾರ ಈ ಮೂಲಕ ಹಣ ದುಂದುವೆಚ್ಚ ಮಾಡುತ್ತಿದೆ. ಆದ್ದರಿಂದ ಶೀಘ್ರದಲ್ಲಿ ಇದನ್ನು ಹಿಂಪಡೆಯಬೇಕು ಎಂದು ಹೇಳಿದರು.
ಕಳಪೆ ಗುಣಮಟ್ಟದ ಸೈಕಲ್ ವಿತರಣೆ: ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಅತ್ಯಂತ ಕಳಪೆ ಗುಣಮಟ್ಟದ ಸೈಕಲ್ ವಿತರಣೆ ಮಾಡುತ್ತಿದೆ. ಆದ್ದರಿಂದ ಗುಣಮಟ್ಟ ಪರೀಕ್ಷೆ ಮಾಡಿ ಆ ಬಳಿಕ ಸೈಕಲ್ಗಳ ವಿತರಣೆ ಮಾಡಲಿ ಎಂದು ಐವನ್ ಡಿಸೋಜ ಆಗ್ರಹಿಸಿದರು.
ಗುಜರಿ ಸೈಕಲ್ಗಳು ಅದಕ್ಕಿಂತ ಉತ್ತಮವಾಗಿದೆ. ಸೈಕಲ್ಗೆ ಬಳಸಿರೋದು ಕಬ್ಬಿಣ ಎಂಬುದರ ಬಗ್ಗೆ ಶಂಕೆಯಿದೆ. ಈ ಬಗ್ಗೆ ನನ್ನನ್ನು ಸೇರಿಸಿ ಎಲ್ಲಾ ಪಕ್ಷಗಳ 20 ಜನರ ಸಮಿತಿಯು ಸರ್ಕಾರಕ್ಕೆ ಸೈಕಲ್ ಗುಣಮಟ್ಟ ಪರೀಕ್ಷಿಸಿ ವಿತರಣೆ ಮಾಡುವಂತೆ ವಿನಂತಿ ಮಾಡಿತ್ತು. ಆದರೆ ಸರ್ಕಾರ ಅದನ್ನು ಗಣನೆಗೆ ತೆಗೆದುಕೊಳ್ಳದೆ ಈ ವರ್ಷ ಮತ್ತೆ ಸೈಕಲ್ಗೆ ಟೆಂಡರ್ ಕರೆದಿದೆ.
ಈಗಾಗಲೇ ಕೊಟ್ಟ ಸೈಕಲ್ 3,500 ಸಾವಿರ ರೂಪಾಯಿಯ ಸೈಕಲ್ ಅಲ್ಲ. ಹಾಗಾಗಿ ತಕ್ಷಣ ಇದುವರೆಗೆ ಕೊಟ್ಟ ಸೈಕಲ್ಗಳ ಬಗ್ಗೆ ತನಿಖೆಯಾಗಲಿ ಎಂದು ಐವನ್ ಡಿಸೋಜ ಒತ್ತಾಯಿಸಿದರು. ದ.ಕ.ಜಿಲ್ಲೆಯಲ್ಲಿ 2019-20 ನೇ ಸಾಲಿನಲ್ಲಿ ಈಗಾಗಲೇ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾಗಿದೆ. ಈಗ ಎಷ್ಟು ಜನರ ಸೈಕಲ್ ಯಥಾ ಸ್ಥಿತಿಯಲ್ಲಿದೆ ಎಂದು ಪ್ರಶ್ನಿಸಿದರು.
8ನೇ ಕ್ಲಾಸ್ ಮಕ್ಕಳಿಗೆ ದೊರಕುವ ಈ ಸೈಕಲ್ 10ನೇ ಕ್ಲಾಸ್ ವರೆಗೆ ಅವರು ಬಳಸಬೇಕು. ಆದರೆ ಅದನ್ನು ಮರುವರ್ಷವೇ ಬಳಸುವ ಸ್ಥಿತಿಯಲ್ಲಿ ಇರೋದಿಲ್ಲ. ಈ ಯೋಜನೆ ನಿಷ್ಪ್ರಯೋಜಕ. ಸೈಕಲ್ ಖರೀದಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆಯಾಗಲಿ ಎಂದು ಐವನ್ ಡಿಸೋಜ ಒತ್ತಾಯಿಸಿದರು.