ಮಂಗಳೂರು : ಮಳಲಿಯ ಮಸೀದಿ ನವೀಕರಣ ವೇಳೆ ದೇವಾಲಯ ಶೈಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಾನದ ಮೂಲಕ ಸತ್ಯಾಸತ್ಯತೆ ತಿಳಿಯಲು ಮೇ 25ರಂದು ತಾಂಬೂಲ ಪ್ರಶ್ನೆಯನ್ನಿಡಲು ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ) ಹಾಗೂ ಭಜರಂಗದಳ ನಿರ್ಧರಿಸಿವೆ.
ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದ ಮುಂಭಾಗವನ್ನು ಕೆಡವಿದಾಗ ದೇವಾಲಯದ ಶೈಲಿ ಪತ್ತೆಯಾಗಿತ್ತು. ಆ ಬಳಿಕ ಕಾಮಗಾರಿ ನಡೆಸದಂತೆ ನ್ಯಾಯಾಲಯ ಆದೇಶಿಸಿತ್ತು. ಈ ವಿಚಾರ ಬೆಳಕಿಗೆ ಬಂದ ಬಳಿಕ ವಿಹೆಚ್ಪಿ ಮತ್ತು ಭಜರಂಗದಳ ಇದನ್ನು ಹಿಂದೂ ಧಾರ್ಮಿಕ ನಂಬುಗೆಯಾಗಿರುವ ಅಷ್ಟಮಂಗಳ ಪ್ರಶ್ನೆಯನ್ನಿಟ್ಟು ಇದರ ಇತಿಹಾಸ ತಿಳಿಯಲು ನಿರ್ಧರಿಸಿತ್ತು.
ಅಷ್ಟಮಂಗಳವೆಂಬುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತಿ ಹೆಚ್ಚಿನ ನಂಬುಗೆಯುಳ್ಳ ಪದ್ದತಿ. ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಪುರಾಣದ ಎಲ್ಲಾ ವಿಚಾರಗಳು ತಿಳಿಯುತ್ತದೆ ಎಂಬ ನಂಬುಗೆ ಇದೆ. ಈ ಅಷ್ಟಮಂಗಳದ ಮೂಲಕ ಮಳಲಿಯ ದೇವಾಲಯ ಪತ್ತೆಯ ಇತಿಹಾಸ ತಿಳಿಯಲು ಮುಂದಾಗಿರುವ ವಿಹೆಚ್ಪಿ ಮತ್ತು ಭಜರಂಗದಳ ಇದಕ್ಕೆ ಪೂರ್ವಭಾವಿಯಾಗಿ ತಾಂಬೂಲ ಪ್ರಶ್ನೆಯನ್ನಿಡಲು ನಿರ್ಧರಿಸಿದೆ.
ತಾಂಬೂಲ ಪ್ರಶ್ನೆಯ ಮೂಲಕ ದೇವಾಲಯ ಶೈಲಿ ಹೊಂದಿರುವ ಮಸೀದಿಯಲ್ಲಿ ಇರುವ ದೇವರ ಸಾನಿಧ್ಯ ಯಾವುದು?, ಅಷ್ಟಮಂಗಳ ಎಲ್ಲಿ ಇಡಬೇಕು ಮತ್ತು ಯಾವಾಗ ಇಡಬೇಕು? ಎಂಬುದನ್ನು ತಿಳಿದುಕೊಳ್ಳಲು ನಿರ್ಧರಿಸಲಾಗಿದೆ. ತಾಂಬೂಲ ಪ್ರಶ್ನೆಯೆನ್ನುವುದು ಜ್ಯೋತಿಷ್ಯದಲ್ಲಿ ಅಷ್ಟಮಂಗಳಕ್ಕಿಂತ ಸ್ವಲ್ಪ ಕಡಿಮೆಯಾಗಿರುವ ಪ್ರಶ್ನಾ ವಿಧಾನ. ಈ ತಾಂಬೂಲ ಪ್ರಶ್ನೆಯನ್ನು ಗೌಪ್ಯ ಸ್ಥಳದಲ್ಲಿ ಮೇ 25ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಭಜರಂಗದಳ ಜಿಲ್ಲಾ ಮುಖಂಡ ಪ್ರದೀಪ್ ಸರಿಪಳ್ಳ ತಿಳಿಸಿದ್ದಾರೆ.
ಇದನ್ನೂ ಓದಿ: ಮಳಲಿ ಮಸೀದಿ ನವೀಕರಣದ ವೇಳೆ ದೇಗುಲ ಶೈಲಿ ಪತ್ತೆ; ಅಷ್ಟಮಂಗಲ ಪ್ರಶ್ನೆ ನಡೆಸಲು ವಿಶ್ವ ಹಿಂದೂ ಪರಿಷತ್ ನಿರ್ಧಾರ