ಮಂಗಳೂರು: ಫೆ.14 ರಂದು ಪ್ರೇಮಿಗಳ ದಿನಾಚರಣೆ ಆಚರಿಸದಂತೆ ಬಜರಂಗ ದಳ ಎಚ್ಚರಿಕೆ ನೀಡಿದೆ. ಈ ಸಂಬಂಧ ಬಜರಂಗದಳ ಮುಖಂಡನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಈ ಕುರಿತು ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್, ಪ್ರೇಮಿಗಳ ದಿನಾಚರಣೆ ಮಾಡದಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ಮುಂದೆ ಇದನ್ನು ಪುನರಾರ್ವತಿಸದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಪ್ರೇಮಿಗಳ ದಿನಾಚರಣೆ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಜರಂಗದಳವು ಪ್ರೇಮಿಗಳ ದಿನಾಚರಣೆಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಪಾಶ್ಚಿಮಾತ್ಯ ಸಂಸ್ಕೃತಿಗಳು ಯುವ ಸಮುದಾಯವನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದು, ನಮ್ಮ ಅಮೂಲ್ಯ ಸಂಸ್ಕೃತಿ ಆಚರಣೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಇದನ್ನು ಬಜರಂಗದಳ ವಿರೋಧಿಸುತ್ತದೆ. ನಗರದ ಎಲ್ಲಾ ಹೂ ಅಂಗಡಿ ಮತ್ತು ಗಿಫ್ಟ್ ಸೆಂಟರ್ಗಳು ಪ್ರೇಮಿಗಳ ದಿನಾಚರಣೆಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು ಮತ್ತು ಈ ಆಚರಣೆಗೆ ಬೆಂಬಲ ಸೂಚಿಸಬಾರದು ಎಂದು ಬಜರಂಗದಳ ಎಚ್ಚರಿಸಿತ್ತು.
ಹಿಂದೆ ನಡೆದಿತ್ತು ದಾಳಿ:
2019 ರಲ್ಲಿ ಮಂಗಳೂರಿನ ಕರಂಗಲ್ಪಾಡಿಯಲ್ಲಿ ಹೂವಿನ ಅಂಗಡಿಗೆ ದಾಳಿ ನಡೆಸಿ ಅಲಂಕಾರ ಮಾಡಿ ಇಡಲಾಗಿದ್ದ ಹೂವುಗಳಿಗೆ ಹಾನಿ ಮಾಡಲಾಗಿತ್ತು. ಪಿಲಿಕುಳ, ಕದ್ರಿ ಪಾರ್ಕ್ ನಲ್ಲಿ ಪ್ರೇಮಿಗಳ ದಿನಾಚರಣೆ ದಿನ ಸಂಭ್ರಮದಲ್ಲಿದ್ದ ಪ್ರೇಮಿಗಳ ಮೇಲೆ ದಾಳಿ ಮಾಡಿದ ಘಟನೆ ಈ ಹಿಂದೆ ನಡೆದಿತ್ತು.
ಪೊಲೀಸರು ಏನನ್ನುತ್ತಾರೆ?
ಪ್ರತಿವರ್ಷ ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ ನಡೆಯುವ ದಿನ ಬಜರಂಗದಳ, ಶ್ರೀರಾಮಸೇನೆ ಮೊದಲಾದ ಹಿಂದು ಸಂಘಟನೆಗಳು ನೀಡುವ ಎಚ್ಚರಿಕೆ ಹಿನ್ನೆಲೆ ಪೊಲೀಸ್ ಇಲಾಖೆಯು ನಗರದಲ್ಲಿ ಬಿಗಿ ಭದ್ರತೆ ನೀಡುತ್ತದೆ. ಆದರೂ ಕೆಲವೆಡೆ ಪೊಲೀಸರ ಕಣ್ತಪ್ಪಿಸಿ ಅಹಿತಕರ ಘಟನೆಗಳು ನಡೆಯುತ್ತಿದೆ. ಈ ಬಾರಿಯೂ ಪೊಲೀಸರು ಆ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.