ಮಂಗಳೂರು: ಮಂಗಳೂರು ಗಲಭೆಗೆ ನನ್ನ ಭಾಷಣ ಕಾರಣ ಎಂಬುದು ಜನರಲ್ಲಿ ತಪ್ಪಾಭಿಪ್ರಾಯ ಮೂಡಿಸಲಾಗುತ್ತದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೊಂದಲ ಬಗೆಹರಿಸಲು ಸರ್ಕಾರ ವಿಫಲವಾಗಿದೆ. ಈ ವೈಫಲ್ಯಕ್ಕೆ ಬೇರೆಯವರ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಭಾಷಣದಲ್ಲಿ ಜನರ ಭಾವನೆ ಏನಿದೆ? ಎಂದು ತಿಳಿಸಿದ್ದೆ. ಉತ್ತರ ಭಾರತದಲ್ಲಿ ಆದಂತೆ ಇಲ್ಲಿ ಆಗುವುದು ಬೇಡ ಎಂದು ಎಚ್ಚರಿಸಿದ್ದೆ. ಆದರೆ ನನ್ನ ಮೇಲೆ ಆಪಾದನೆ ಮಾಡಲಾಗುತ್ತಿದೆ ಎಂದರು.
ನನ್ನ ಮೇಲೆ ಈ ರೀತಿ ಸುಳ್ಳಾರೋಪ ಮಾಡುವುದು ಇದು ಮೊದಲಲ್ಲ. ವಿದ್ಯಾರ್ಥಿ ನಾಯಕನಾಗಿದ್ದಾಗಲೇ ನನ್ನನ್ನು ದಮನ ಮಾಡುವ ಯತ್ನ ಆಯಿತು. 2006 ರಲ್ಲಿ ಸರ್ಕ್ಯೂಟ್ ಹೌಸ್ ನಲ್ಲಿ ನಾನು ಇರುವ ವೇಳೆ ಅದೇ ಸರ್ಕ್ಯುಟ್ ಹೌಸ್ ನಲ್ಲಿದ್ದ ಸದಾನಂದ ಗೌಡರು ನಾನು ಸಿಮಿ ಜೊತೆಗೆ ಹೋಟೆಲ್ ನಲ್ಲಿ ಮೀಟಿಂಗ್ ಮಾಡುತ್ತೇನೆ ಎಂದು ಮಾಡಿದ್ದರು. ನನ್ನ ಜೈಲಿಗೆ ಹಾಕುವ ಅವರ ಉದ್ದೇಶ ಈಡೇರಲಿಲ್ಲ. ನನ್ನ ಕ್ಷೇತ್ರದ ಸರ್ವ ಜನಾಂಗದವರು ನನ್ನನ್ನು ಶಾಸಕ ಮಾಡಿ ಮಂತ್ರಿಯಾಗುವಂತೆ ಮಾಡಿದರು ಎಂದರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಸಿದ್ದರಾಮಯ್ಯ ಅವರಿಗೆ ಮಂಗಳೂರು ಪ್ರವೇಶ ಮಾಡಲು ನಿರಾಕರಿಸಿರುವುದು ಖಂಡನೀಯ. ಮುಖ್ಯಮಂತ್ರಿಗೆ ಇರುವ ಜವಾಬ್ದಾರಿ ಗಿಂತ ಹೆಚ್ಚು ಜವಾಬ್ದಾರಿ ವಿಪಕ್ಷ ನಾಯಕನಿಗಿದೆ ಎಂದರು.
ಗೋಲಿಬಾರ್ ನಲ್ಲಿ ಅಮಾಯಕರನ್ನು ಪೊಲೀಸರು ಕೊಂದಿದ್ದಾರೆ.ಇದು ಸರ್ಕಾರಿ ಪ್ರಾಯೋಜಕತ್ವದ ಘಟನೆ. ಈಗ ಪರಿಸ್ಥಿತಿ ಶಾಂತವಾಗಿರುವುದರಿಂದ ತಕ್ಷಣ ಕರ್ಪ್ಯೂ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.