ಉಳ್ಳಾಲ : ಮೂರುಕಾಸಿನ ಬೆಲೆಯಿಲ್ಲದವರು ನನಗೆ ಬುದ್ಧಿ ಹೇಳಬೇಡಿ. ಬೇರೆ ಧರ್ಮದವರ ಕಾರ್ಯಕ್ರಮಕ್ಕೆ ಹೋದಾಗ ತಪ್ಪಾದಲ್ಲಿ ಅದನ್ನು ತಿದ್ದಲು ಧರ್ಮಗುರುಗಳು ಇದ್ದಾರೆ. ಅವರು ಕೊಡುವ ಸಲಹೆ, ಸೂಚನೆಗಳನ್ನು ಒಪ್ಪಲು ನಾನು ತಯಾರಿದ್ದೇನೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು ಟಿ ಖಾದರ್ ಕಿಡಿಕಾರಿದ್ದಾರೆ.
ಖಾದರ್ ವಿಧಾನಸಭೆಯ ವಿಪಕ್ಷ ಉಪನಾಯಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಂಜನಾಡಿ ಕಾಂಗ್ರೆಸ್ ಗ್ರಾಮ ಸಮಿತಿ ಮತ್ತು ವಿವಿಧ ಕಾಂಗ್ರೆಸ್ ಗ್ರಾಮ ಘಟಕಗಳ ಆಶ್ರಯದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ, ಯು.ಟಿ ಖಾದರ್ ಅನ್ಯ ಧರ್ಮದ ಮಂದಿರಗಳಿಗೆ ಹೋಗುವುದನ್ನು ಟೀಕಿಸುತ್ತಿದ್ದ ಪಕ್ಷಕ್ಕೆ ಅದರ ಹೆಸರೇಳದೆ ವಾಗ್ದಾಳಿ ನಡೆಸಿದ್ದಾರೆ.
ಬೇರೆ ಧರ್ಮದ ಕಾರ್ಯಕ್ರಮಕ್ಕೆ ಹೋದಾಗ ಆ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುವವರಿದ್ದಾರೆ. ಅಲ್ಲಿ ಏನಾದರೂ ಹೆಚ್ಚು ಕಮ್ಮಿಯಾದಲ್ಲಿ ಅದನ್ನು ತಿಳಿಸಲು ಹಿರಿಯರಿದ್ದಾರೆ. ಅವರು ಕೊಡುವ ಸಲಹೆ, ಸೂಚನೆಗಳನ್ನು ಒಪ್ಪಲು ನಾನು ತಯಾರಿದ್ದೇನೆ. ಆದರೆ, ಮೂರುಕಾಸಿನ ಬೆಲೆಯಿಲ್ಲದವರು ನನ್ನ ಬಗ್ಗೆ ಮಾತನಾಡುವ ಅವಶ್ಯಕತೆಯಿಲ್ಲ.
ಕೆಲವರಿಗೆ ಹಸಿರು ಕಂಡರೆ ಆಗುವುದಿಲ್ಲ, ಇನ್ನು ಕೆಲವರಿಗೆ ಕೇಸರಿ ಕಂಡರೆ ಆಗುವುದಿಲ್ಲ. ಮುನುಷ್ಯತ್ವ ಇರುವ ಮನುಷ್ಯರನ್ನು ಕಂಡರೆ ಆಗದವರು ಮನುಷ್ಯ ನಿರ್ಮಿಸಿದ ಬಣ್ಣಕ್ಕೆ ಬೆಲೆ ಕೊಡುತ್ತಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ಆಗುವ ಅಪಪ್ರಚಾರಗಳ ಕುರಿತು ಕಾರ್ಯಕರ್ತರು ಸೂಕ್ತ ಉತ್ತರ ಕೊಡಬೇಕಿದೆ ಎಂದರು.
ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹನಂತಹ ಮೂರ್ಖ ಯಾರಿಲ್ಲ: ಯು ಟಿ ಖಾದರ್ ಗರಂ
ಕಾಂಗ್ರೆಸ್ ಪಕ್ಷದ ಸಿದ್ಧಾಂತ ಉಪಕಾರ ಮಾಡುವುದೇ ಹೊರತು ಉಪದ್ರ ಮಾಡುವುದಲ್ಲ. ಉಳ್ಳಾಲ ಉರೂಸ್ಗೆ ಸರ್ಕಾರ ಕೋಟ್ಯಂತರ ಅನುದಾನವನ್ನು ಒದಗಿಸಿದೆ. ಸಂಭ್ರಮದಿಂದ ಕಾರ್ಯಕ್ರಮ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ತೊಕ್ಕೊಟ್ಟು ಕೊರಗಜ್ಜನ ಕಟ್ಟೆಯಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಸೌಹಾರ್ದತೆಯ ಕೊಂಡಿಯಾಗಿ ಕಾಂಗ್ರೆಸ್ ಕಾರ್ಯಾಚರಿಸುತ್ತಿದೆ ಎಂದರು.