ಸುಳ್ಯ(ದಕ್ಷಿಣ ಕನ್ನಡ): ಶೌಚಾಲಯದ ಗೋಡೆ ದುರಸ್ತಿ ಮಾಡುತ್ತಿದ್ದ ವೇಳೆ ಗೋಡೆ ಕುಸಿದು ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟ ದಾರುಣ ಘಟನೆ ಸುಳ್ಯ ತಾಲೂಕಿನ ಎಣ್ಮೂರು ಗ್ರಾಮದಲ್ಲಿ ನಡೆದಿದೆ.
ಬೀಪಾತುಮ್ಮ (60) ಹಾಗೂ ನೆಬಿಸಾ (45) ಮೃತರು. ಎಣ್ಮೂರು ಗ್ರಾಮದ ನರ್ಲಡ್ಕದ ನಿವಾಸಿ ಹರೀಶ ನಾಯ್ಕ್ ಎಂಬವರ ಮನೆಯ ಹಳೆಯ ಶೌಚಾಲಯದ ಗೋಡೆ ಕೆಡವುತ್ತಿದ್ದ ಸಮಯದಲ್ಲಿ ಮಣ್ಣಿನ ಇಟ್ಟಿಗೆಯ ಗೋಡೆ ಮೈಮೇಲೆ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗ್ತಿದೆ.
ಹಳೆಯ ಶೌಚಾಲಯದ ಗೋಡೆಯನ್ನು ತೆಗೆದು ಹೊಸ ಕಟ್ಟಡ ಕಟ್ಟುವುದಕ್ಕಾಗಿ ಕೆಲಸ ಮಾಡಲಾಗುತ್ತಿತ್ತು. ಇತರ ಕೆಲಸಗಾರರ ಜತೆ ಸಮೀಪದ ಮನೆಯ ಬೀಪಾತುಮ್ಮ ಹಾಗೂ ನೆಬಿಸಾ ಅವರು ಕೆಲಸದಲ್ಲಿ ತೊಡಗಿದ್ದರು. ಆ ವೇಳೆ ಮಣ್ಣಿನ ಇಟ್ಟಿಗೆಯ ಗೋಡೆ ಇವರ ಮೇಲೆ ಕುಸಿದಿದೆ.
ತಕ್ಷಣ ಅಲ್ಲಿದ್ದವರು ಮಣ್ಣಿನ ರಾಶಿಯಲ್ಲಿ ಸಿಲುಕಿದ್ದ ಇವರಿಬ್ಬರನ್ನು ಹೊರ ತೆಗೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಕಾಣಿಯೂರು ತಲುಪುವಾಗ ಬೀಪಾತುಮ್ಮ ಅವರು ಮೃತಪಟ್ಟಿದ್ದರಿಂದ ಅವರ ಮೃತ ದೇಹವನ್ನು ವಾಪಸ್ ನರ್ಲಡ್ಕಕ್ಕೆ ತರಲಾಗಿದೆ. ಇತ್ತ ನೆಬಿಸಾ ಅವರನ್ನು ಪುತ್ತೂರಿನ ಆಸ್ಪತ್ರೆಗೆ ತಲುಪಿಸಲಾಗಿತ್ತಾದರೂ ಆಸ್ಪತ್ರೆ ತಲುಪುವ ವೇಳೆಗೆ ಅವರು ಕೂಡ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬೆಳ್ಳಾರೆ ಎಸ್ಐ ಆಂಜನೇಯ ರೆಡ್ಡಿ ಸೇರಿದಂತೆ ಪ್ರಮುಖರು ಆಗಮಿಸಿ ಮಾಹಿತಿ ಪಡೆಯುತ್ತಿದ್ದಾರೆ. ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಬೈಕ್ ರ‍್ಯಾಲಿಗೆ ಪಟ್ಟು: ನೂರಾರು ಮಂದಿ ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ