ಮಂಗಳೂರು: ತುಳುವಿನಲ್ಲಿ ಹಾಸ್ಯ ನಾಟಕದ ಅಬ್ಬರದ ನಡುವೆ ಪೌರಾಣಿಕ ನಾಟಕಗಳು ಮೆರೆದದ್ದು ಕಡಿಮೆ. ಆದರೆ ಕಡಿಮೆ ಅವಧಿಯಲ್ಲಿ ತುಳುವಿನ ಪೌರಾಣಿಕ ಕಥೆಯುಳ್ಳ ನಾಟಕವೊಂದು ಜನಪ್ರಿಯವಾಗಿದ್ದು, ವಿದೇಶದಲ್ಲೂ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದೆ.
ತುಳು ಹಾಸ್ಯ ನಾಟಕದಲ್ಲಿ ವಿಭಿನ್ನ ಛಾಪು ಮೂಡಿಸಿದ, ತುಳು ಸಿನಿಮಾದಲ್ಲೂ ಯಶಸ್ವಿಯಾದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ನಿರ್ದೇಶನದಲ್ಲಿ 'ಶಿವಧೂತೆ ಗುಳಿಗೆ' ತುಳು ನಾಟಕ ಕರಾವಳಿಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ನಾಟಕ ಕರಾವಳಿ ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ಈಗಾಗಲೇ ಪ್ರದರ್ಶನವಾಗುತ್ತಿದ್ದು, 200ನೇ ಪ್ರದರ್ಶನ ಕಾಣುತ್ತಿದೆ. ಮೇ ಅಂತ್ಯದಲ್ಲಿ 300ನೇ ಪ್ರದರ್ಶನ ಕಾಣಲಿದೆ ಎಂದು ನಿರ್ದೇಶಕರು ಹೇಳಿದರು.
ಈ ನಾಟಕ ಈಗಾಗಲೇ ಮುಂಬೈ, ಗುಜರಾತ್ನಲ್ಲಿ ಪ್ರದರ್ಶನ ಕಂಡಿದ್ದು, ಮೇ 21ಕ್ಕೆ ಬಹ್ರೇನ್ ದೇಶದಲ್ಲಿ ಪ್ರದರ್ಶನಗೊಳ್ಳಲಿದೆ. ದುಬೈ ಮತ್ತು ಕುವೈತ್ನಲ್ಲಿ ನಾಟಕ ಪ್ರದರ್ಶನಕ್ಕೆ ಮಾತುಕತೆ ನಡೆಯುತ್ತಿದೆ. ಈ ತುಳು ನಾಟಕವನ್ನು ಕನ್ನಡ ಮತ್ತು ಮಲಯಾಳಂ ಭಾಷೆಗೆ ಅನುವಾದಿಸುವ ಕಾರ್ಯ ನಡೆಯುತ್ತಿದ್ದು, ಆಗಸ್ಟ್ ನಂತರ ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಪ್ರದರ್ಶನವಾಗಲಿದೆ ಎಂದು ವಿಜಯ್ಕುಮಾರ್ ಕೊಡಿಯಾಲ್ ಬೈಲ್ ವಿವರಿಸಿದರು.
'ಶಿವಧೂತೆ ಗುಳಿಗೆ' ನಾಟಕ ದಿನದಲ್ಲಿ ಎರಡೆರಡು ಪ್ರದರ್ಶನವನ್ನು ಕಾಣುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿರುವ ಈ ನಾಟಕ ವಿದೇಶದಲ್ಲೂ ಪ್ರದರ್ಶನಕ್ಕೆ ಸಜ್ಜಾಗಿರುವುದು ವಿದೇಶದಲ್ಲಿರುವ ತುಳುವರಲ್ಲಿ ಕುತೂಹಲ ಹೆಚ್ಚಿಸಿದೆ.