ಮಂಗಳೂರು: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ನಾಳೆ ಕೂಡ ಜಿಲ್ಲೆಯಲ್ಲಿ ಸಂಪೂರ್ಣ ಬಂದ್ ಇರಲಿದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 3ರವರೆಗೆ ಅಗತ್ಯ ಸಾಮಗ್ರಿ ಖರೀದಿಸಲು ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ದಿನಸಿ ಖರೀದಿಸಬಹುದು. ಆದರೆ ಕುಟುಂಬದಿಂದ ಒಬ್ಬರು ಮಾತ್ರ ಆಗಮಿಸಬೇಕು ಎಂದು ತಿಳಿಸಿದರು
ಎರಡು ದಿನ ಜಿಲ್ಲೆಯಲ್ಲಿ ಕಡ್ಡಾಯ ಬಂದ್ಗೆ ಬೆಂಬಲ ನೀಡಿರುವ ಸಾರ್ವಜನಿಕರು ನಾಳೆ ಸಹ ಬೆಂಬಲ ನೀಡಬೇಕು. ವ್ಯಾಪಾರಿಗಳು ನಿಗದಿತ ದರದಲ್ಲೇ ಆಹಾರ ಸಾಮಗ್ರಿಗಳನ್ನು ಕೊಡಬೇಕು. ದರ ಹೆಚ್ಚು ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.