ಉಳ್ಳಾಲ: ಕೊರೊನಾ ವೈರಸ್ ಹಿನ್ನೆಲೆ ಜನರಲ್ಲಿ ಜ್ವರದ ಲಕ್ಷಣ ಕಂಡು ಬಂದರೆ ಅವರ ಗಂಟಲು ದ್ರವದ ಪರೀಕ್ಷಗೆ ಕಿಯೋಸ್ಕ್ (ಗಂಟಲು ದ್ರವ ಸಂಗ್ರಹಣಾ ಕೇಂದ್ರ)ವನ್ನು ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಆರಂಬಿಸಿದ್ದು, ಇಂದಿನಿಂದ ಉಳ್ಳಾಲದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದರು.
ಉಳ್ಳಾಲ ಆರೋಗ್ಯ ಕೇಂದ್ರದಲ್ಲಿ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಆರಂಬಿಸಿದ ಗಂಟಲು ದ್ರವ ಸಂಗ್ರಹಣಾ ಕೇಂದ್ರ (ಕಿಯೋಸ್ಕ್)ವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೋಗಿಗಳನ್ನು ತಪಾಸಣೆ ನಡೆಸುವ ವೈದ್ಯರ ಆರೋಗ್ಯ ಅತ್ಯಂತ ಮಹತ್ವದ್ದು. ಸಣ್ಣಮಟ್ಟಿನ ಜ್ವರ, ಅಸೌಖ್ಯದಿಂದ ಬಂದಾಗ ಅವರನ್ನು ಸುರಕ್ಷಿತವಾಗಿ ತಪಾಸಣೆ ನಡೆಸುವುದು ವೈದ್ಯರ ಆದ್ಯ ಕರ್ತವ್ಯ. ರೋಗಿಗಳ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆ ನಡೆಸಿ ಅವರಲ್ಲಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಅವರನ್ನು ಸಂಬಂಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಇದು ಸಹಕಾರಿಯಾಗಿದೆ ಎಂದರು.
ಈ ಪರೀಕ್ಷೆಗೆ ಸಂಬಂಧಿಸಿದ ವೈದ್ಯಕೀಯ ಸಲಕರಣೆಗಳನ್ನು ಒದಗಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಸೂಚಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಉಳ್ಳಾಲ ಆರೋಗ್ಯ ಕೇಂದ್ರದ ಆರೋಗ್ಯದಿಕಾರಿ ಡಾ. ಪ್ರಶಾಂತ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.