ಪುತ್ತೂರು: ಚಾಲಾಕಿ ಕಳ್ಳನೊಬ್ಬ ಕದ್ದ ಚಿನ್ನವನ್ನು ಐಸ್‌ಕ್ರೀಂ ಜೊತೆ ತಿಂದು ಸಿಕ್ಕಿ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ. ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಈ ಖತರ್ನಾಕ್ ಕೃತ್ಯ ಬಯಲಾಗಿದೆ.
ಕೇರಳ ರಾಜ್ಯದ ತ್ರಿಶೂರು ಜಿಲ್ಲೆಯ ಅಂಬಳೂರಿನ ಶಿಬು ಬಂಧಿತ ಆರೋಪಿ. ಮಾರ್ಚ್ 31ರ ರಾತ್ರಿ ಸುಳ್ಯ ಹಳೆ ಬಸ್ ನಿಲ್ದಾಣದ ಬಳಿ ಇರುವ ಮೋಹನ ಜ್ಯುವೆಲ್ಲರಿ ಮಾರ್ಟ್‌ನಲ್ಲಿ ಕಳ್ಳತನ ನಡೆದಿತ್ತು. ಏಳೂವರೆ ಲಕ್ಷ ಮೌಲ್ಯದ 180 ಗ್ರಾಂ ಚಿನ್ನ ಹಾಗೂ 50 ಸಾವಿರ ನಗದು ಕಳ್ಳತನವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಪೊಲೀಸರು ಕೇರಳದ ತಂಗಚ್ಚ ಅಲಿಯಾಸ್ ಮ್ಯಾಥ್ಯೂ ಮತ್ತು ಶಿಬುವನ್ನು ಬಂದಿಸಿದ್ದರು.
ಪ್ರಾರಂಭದಲ್ಲಿ 147 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆ ಬಳಿಕ ಶಿಬು ಆರೋಗ್ಯದಲ್ಲಿ ಏರುಪೇರು ಆಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಎಕ್ಸ್ ರೇ ಮಾಡಿದ ಸಂದರ್ಭ ಹೊಟ್ಟೆಯಲ್ಲಿ ಆಭರಣ ಪತ್ತೆಯಾಗಿದೆ. ಹೀಗಾಗಿ ವೈದ್ಯರು ಆಪರೇಷನ್ ನಡೆಸಿ ಹೊಟ್ಟೆಯಿಂದ 35 ಗ್ರಾಂ ಚಿನ್ನವನ್ನು ಹೊರ ತೆಗೆದಿದ್ದಾರೆ. 25ಕ್ಕೂ ಹೆಚ್ಚು ಉಂಗುರ, ಕಿವಿಯ ಆಭರಣ ಪತ್ತೆಯಾಗಿದೆ.
ಬಂಧನದ ಸಂದರ್ಭ ಪೊಲೀಸರಿಂದ ಮರೆಮಾಚುವುದಕ್ಕೆ ಶಿಬು ಆಭರಣ ನುಂಗಿದ್ದ ಎಂದು ವಿಚಾರಣೆ ಸಂದರ್ಭ ಗೊತ್ತಾಗಿದೆ. ಒಟ್ಟಿನಲ್ಲಿ ಆರೋಪಿ ಶಿಬು ಘನಂದಾರಿ ಕೆಲಸ ಮಾಡಿ, ಆಭರಣ ನುಂಗಿ ತನ್ನ ಆರೋಗ್ಯಕ್ಕೆ ಆಪತ್ತು ತಂದುಕೊಂಡಿದ್ದ. ಸದ್ಯ ಜೀವಾಪಾಯದಿಂದ ಪಾರಾಗಿದ್ದರು, ನ್ಯಾಯದ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.