ಮಂಗಳೂರು: ನಗರದ ಬಲ್ಮಠದಲ್ಲಿನ ಮೆಪಲ್ ಶೋರೂಂಗೆ ನುಗ್ಗಿದ ಕಳ್ಳರು 50 ಲಕ್ಷ ರೂ.ಗೂ ಅಧಿಕ ಮೌಲ್ಯದ ಆ್ಯಪಲ್ ಫೋನ್‌ಗಳನ್ನು ಕಳವುಗೈದಿರುವ ಬಗ್ಗೆ ದೂರು ದಾಖಲಾಗಿದೆ. ವೀಕೆಂಡ್ ಕರ್ಫ್ಯೂ ಎರಡು ದಿನ ಬಂದ್ ಇದ್ದ ಶೋರೂಂ ಅನ್ನು ಸಿಬ್ಬಂದಿ ಇಂದು ಬೆಳಗ್ಗೆ ತೆರೆದಾಗ ಈ ಕೃತ್ಯ ಬೆಳಕಿಗೆ ಬಂದಿದೆ.
ಶೋರೂಂ ಹಿಂಭಾಗದ ಕಿಟಕಿ ಒಡೆದು ಒಳ ನುಗ್ಗಿದ ಕಳ್ಳರು 50 ಲಕ್ಷ ರೂ.ಗೂ ಹೆಚ್ಚು ಬೆಲೆಯ ಮೊಬೈಲ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳಕ್ಕೆ ಕದ್ರಿ ಪೊಲೀಸರು ಬಂದು ತನಿಖೆ, ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳರು ಕೃತ್ಯದ ಬಳಿಕ ಶೋರೂಂ ಒಳಗಿದ್ದ ಸಿಸಿಟಿವಿಯ ಡಿವಿಆರ್ ಎತ್ತಿಕೊಂಡು ಹೋಗಿದ್ದಾರೆ. ಹೀಗಾಗಿ ಕಳ್ಳರು ಶೋರೂಂ ಬಗ್ಗೆ ಸಾಕಷ್ಟು ಗೊತ್ತಿರುವ ಮಂದಿಯೇ ಆಗಿರಬೇಕು ಎಂಬ ಸಂಶಯ ವ್ಯಕ್ತವಾಗಿದೆ.
2015 ರ ಸಮಯದಲ್ಲೂ ಇದೇ ಶೋರೂಂನಿಂದ ಭಾರೀ ಪ್ರಮಾಣದ ಕಳವು ಆಗಿತ್ತು. ಅಂದು 20 ಲಕ್ಷದ ಮೊಬೈಲ್ ಗಳು ಕಳವಾಗಿದ್ದವು. ಪ್ರಕರಣವನ್ನು ಬೆನ್ನತ್ತಿದ ಸಿಸಿಬಿ ಪೊಲೀಸರು ಬಳಿಕ ನೇಪಾಳ ಮೂಲದ ನಾಲ್ವರನ್ನು ಬಂಧಿಸಿದ್ದರು. ಶೋರೂಂನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದವರೇ ಕೃತ್ಯಕ್ಕೆ ಸಾಥ್ ನೀಡಿದ್ದು ಬೆಳಕಿಗೆ ಬಂದಿತ್ತು.