ಮಂಗಳೂರು: ಸ್ಯಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲನಾಥ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ 4 ಗಂಟೆಗೆ ಅವರ ಹುಟ್ಟೂರಾದ ಬಂಟ್ವಾಳದ ಸಜಿಪದ ಮಿತ್ತಮಜಲು ಸಮೀಪ ನೆರವೇರಲಿದೆ.
ಮಂಗಳೂರಿನ ಮಿನಿ ಪುರಭವನದಲ್ಲಿ ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿದ್ದು, ಇಂದು ಬೆಳಗ್ಗೆ ಪಾರ್ಥಿವ ಶರೀರದ ಅಂತಿಮ ಯಾತ್ರೆ ಮಂಗಳೂರಿನ ಪದವಿನಂಗಡಿ ದೇವಿಕಟ್ಟೆಯ ನಿವಾಸದಿಂದ ಹೊರಟು ನಂತರ ಮಿನಿ ಪುರಭವನ ತಲುಪಿದೆ. ಬಳಿಕ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭ ಕದ್ರಿ ಗೋಪಾಲನಾಥ್ ಅವರ ಶಿಷ್ಯರು ಹಾಗೂ ಇತರ ಕಲಾವಿದರಿಂದ ಮಿನಿ ಪುರಭವನದ ವೇದಿಕೆಯಲ್ಲಿ ಸಂಗೀತ ಹಾಗೂ ವಾದ್ಯಗೋಷ್ಠಿಯ 'ಸ್ವರಾಂಜಲಿ' ಕಾರ್ಯಕ್ರಮ ನಡೆಯಲಿದೆ. ಈ ವ್ಯವಸ್ಥೆಯನ್ನು ದ.ಕ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮಾಡಿದೆ.