ಮಂಗಳೂರು: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿನ್ನೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ಜಾನಪದ ಕಲಾವಿದೆ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡರ (ಸುಕ್ರಜ್ಜಿ) ಆರೋಗ್ಯ ವಿಚಾರಿಸಿದರು.
ಆರೋಗ್ಯ ವಿಚಾರಿಸಲು ಬಂದ ಸಚಿವರಿಗೆ ಚಿಕಿತ್ಸೆ ಪಡೆಯುತ್ತಿರುವ ಸುಕ್ರಿ ಬೊಮ್ಮಗೌಡ ಅವರು, ಹೇಗಿದ್ದೀರಿ? ಎಂದು ಪ್ರಶ್ನಿಸಿ ಅಚ್ಚರಿ ಮೂಡಿಸಿದರು. ಈಗಲೂ ಹಾಡು ಹಾಡುವ ಬಗ್ಗೆ, 12ನೇ ವಯಸ್ಸಿನಲ್ಲಿ ಮದುವೆಯಾದ ಬಗ್ಗೆ ಸುಕ್ರಿ ಅವರು ಸಚಿವರಿಗೆ ಮಾಹಿತಿ ನೀಡಿದರು. ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ತಮ್ಮ ಆರೋಗ್ಯ ವಿಚಾರಿಸಲು ನನ್ನಲ್ಲಿ ತಿಳಿಸಿದ್ದು, ಅವರ ಸೂಚನೆಯಂತೆ ಇಲ್ಲಿಗೆ ಬಂದಿದ್ದೇನೆ ಎಂದು ಸಚಿವರು ತಿಳಿಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರ ಆರೋಗ್ಯ ಸುಧಾರಿಸುತ್ತಿರುವುದು ಖುಷಿ ತಂದಿದೆ. ಅವರ ಆಸ್ಪತ್ರೆ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು. ಸುಕ್ರಜ್ಜಿಯ ಯೋಗಕ್ಷೇಮದ ಬಗ್ಗೆ ನಿಗಾ ಇಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸುಕ್ರಿ ಬೊಮ್ಮಗೌಡ ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ವಲೀಂ ಮಾತನಾಡಿ, ಅವರನ್ನು ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಆರೋಗ್ಯ ಚಿಂತಾಜನಕವಾಗಿತ್ತು. ಹೃದಯದ ಸಮಸ್ಯೆ, ವಯಸ್ಸಿಗೆ ತಕ್ಕಂತೆ ಎದೆ ಬಡಿತದ ಸಮಸ್ಯೆ ಇತ್ತು. ಚಿಕಿತ್ಸೆ ಬಳಿಕ ಆರೋಗ್ಯ ಸುಧಾರಿಸಿದೆ. ಸದ್ಯಕ್ಕೆ ಆಕ್ಸಿಜನ್ ನೆರವಿನಲ್ಲಿದ್ದಾರೆ. ನಾಳೆ ಆಕ್ಸಿಜನ್ ತೆಗೆಯಲಾಗವುದು. ಒಂದೆರಡು ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: 'ಕರ್ನಾಟಕದಲ್ಲಿ ನಿಮ್ಮದೇ ಪ್ರಪಂಚ ಸೃಷ್ಟಿಸಿ': ರಾಯಭಾರಿಗಳಿಗೆ ಸಿಎಂ ಬೊಮ್ಮಾಯಿ ಕರೆ