ಮಂಗಳೂರು: ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದು ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳಿ ಎಂದು ಪ್ರಧಾನಿ ಮೋದಿಯವರ ಕರೆಯಿಂದ ಸ್ಫೂರ್ತಿಗೊಂಡ ಮಂಗಳೂರಿನ ಕಾನೂನು ಕಾಲೇಜಿನ ವಿದ್ಯಾರ್ಥಿಯೋರ್ವರು ಮನೆಯಲ್ಲೇ ಇದ್ದುಕೊಂಡು ಮೊಬೈಲ್ನಲ್ಲೇ ಕಿರುಚಿತ್ರವೊಂದನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.
'ಏರ್ ಅವು' ಎಂಬ ಟೈಟಲ್ ಹೊಂದಿರುವ ಈ ಕಿರುಚಿತ್ರ ಯೂಟ್ಯೂಬ್ಗೆ ಅಪ್ಲೋಡ್ ಆದ ಎರಡು ದಿನಗಳಲ್ಲೇ ಸಾವಿರಕ್ಕೂ ಹೆಚ್ಚು ಮಂದಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿ ಸುಮನ್ ರಾಜ್ ಅಡ್ಯಾರ್ ಈ ಕಿರುಚಿತ್ರವನ್ನು ನಿರ್ಮಿಸಿದ್ದು, ಕೇವಲ ಒಂದೇ ಪಾತ್ರವಿರುವ ಈ ಚಿತ್ರದಲ್ಲಿ ಅವರೇ ಅಭಿನಯಿಸಿದ್ದಾರೆ. ಚಿತ್ರದುದ್ದಕ್ಕೂ ಸ್ವಗತ ಸಂಭಾಷಣೆಯಿದ್ದರೂ ಎಲ್ಲೂ ಬೋರು ಹೊಡೆಸದಂತೆ ಚಿತ್ರೀಕರಿಸಲಾಗಿದೆ. ಈ ಕಿರುಚಿತ್ರದ ಹಿನ್ನೆಲೆ ಸಂಗೀತವೂ ಹೈಲೈಟ್ ಆಗಿದೆ.
9:08 ನಿಮಿಷದ ಈ ಕಿರುಚಿತ್ರವನ್ನು ಸುಮನ್ ರಾಜ್ ಅವರು ಏಪ್ರಿಲ್ ಕೊನೆಯ ವಾರದಲ್ಲಿ ಚಿತ್ರೀಕರಿಸಿದ್ದಾರೆ. ಸಂಜೆ ಆರಂಭವಾಗಿ ರಾತ್ರಿ 9 ಗಂಟೆ ವೇಳೆಗೆ ಕಿರುಚಿತ್ರ ರೆಕಾರ್ಡ್ ಮಾಡಿದ್ದಾರೆ. ತನಗೆ ಬಿದ್ದ ಕನಸೊಂದರಿಂದ ಪ್ರೇರಣೆಗೊಂಡು ಚಿತ್ರಕ್ಕೆ ಕಥೆ ಹೆಣೆದಿದ್ದೇನೆ ಎಂದು ಹೇಳುವ ಸುಮನ್ ರಾಜ್ ಅವರು, ಯಾವುದೇ ಖರ್ಚಿಲ್ಲದೆ ಈ ಚಿತ್ರ ನಿರ್ಮಿಸಿದ್ದು, ಎಡಿಟಿಂಗ್ ಕೂಡಾ ನಾನೇ ಮಾಡಿದ್ದೇನೆ ಎನ್ನುತ್ತಾರೆ. ಈ ಚಿತ್ರಕ್ಕೆ ತನ್ನ ಸೋದರ ಸಂಬಂಧಿ, ಸಹೋದರ ಹಾಗೂ ತಂಗಿಯ ಸಹಾಯ ಪಡೆದುಕೊಂಡಿದ್ದೇನೆ. ಅಲ್ಲದೆ ತಂಗಿಯೇ ದೆವ್ವದ ಪಾತ್ರ ಮಾಡಿದ್ದಾಳೆ ಎನ್ನುತ್ತಾರೆ.
ಚಿತ್ರೀಕರಣಕ್ಕೆ ನಗರದ ಮೇರಿ ಹಿಲ್ ಬಳಿಯ ಬೊಲ್ಪುಗುಡ್ಡೆಯಲ್ಲಿರುವ ಅಜ್ಜಿ ಮನೆಯನ್ನು ಬಳಸಿಕೊಂಡಿದ್ದೇನೆ. ನನ್ನ ಮೊದಲ ಪ್ರಯತ್ನಕ್ಕೆ ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಮುಂದೆಯೂ ಇದೇ ರೀತಿ ಕಿರುಚಿತ್ರಗಳನ್ನು ನಿರ್ಮಾಣ ಮಾಡುವ ಉದ್ದೇಶವಿದೆ. ಲಾಕ್ಡೌನ್ ಸಂದರ್ಭದಲ್ಲಿ ನನ್ನ ಸಮಯ ಯಾವುದೇ ಕಾರಣಕ್ಕೂ ವ್ಯರ್ಥವಾಗಿಲ್ಲ ಎಂಬ ಆತ್ಮತೃಪ್ತಿಯಿದೆ ಎಂದು ಸುಮನ್ ರಾಜ್ ಅಡ್ಯಾರ್ ಸಂತೋಷ ವ್ಯಕ್ತಪಡಿಸಿದ್ದಾರೆ.