ಮಂಗಳೂರು: ನಗರದ ಸುರತ್ಕಲ್ ಠಾಣಾ ವ್ಯಾಪ್ತಿಯ ಇಡ್ಯಾ ಜನತಾ ಕಾಲೊನಿಯ ಜುಮ್ಮಾ ಮಸೀದಿಗೆ ಕಲ್ಲೆಸೆದಿದ್ದ ಇಬ್ಬರು ಬಾಲಕರನ್ನು ಇಂದು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ.
ಏಪ್ರಿಲ್ 4ರ ತಡರಾತ್ರಿ 2.40ರ ಸುಮಾರಿಗೆ ನಗರದ ಸುರತ್ಕಲ್ ಠಾಣಾ ವ್ಯಾಪ್ತಿಗೊಳಪಟ್ಟ ಇಡ್ಯಾ ಜನತಾ ಕಾಲೊನಿಯ ಜುಮ್ಮಾ ಮಸೀದಿಗೆ ಕಲ್ಲೆಸೆಯಲಾಗಿತ್ತು. ಇದರಿಂದ ಮಸೀದಿಯ ಕಿಟಕಿ ಗಾಜು ಒಡೆದಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಮಸೀದಿ ಹಾಗೂ ಜನತಾ ಕಾಲೊನಿ ಪರಿಸರದ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಏಪ್ರಿಲ್ 12ರಂದು ಕುತ್ತೆತ್ತೂರು ಎಂಬಲ್ಲಿ ಕೃತ್ಯದಲ್ಲಿ ಭಾಗಿಯಾದ ಇಬ್ಬರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇಂದು ಇಬ್ಬರು ಬಾಲಕರನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದ್ದು, ಕೃತ್ಯಕ್ಕೆ ಉಪಯೋಗಿಸಿರುವ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಓದಿ: ಪಾಠ ಮಾಡುವಾಗಲೇ ಹೃದಯಾಘಾತ.. ವಿದ್ಯಾರ್ಥಿಗಳ ಎದುರೇ ಪ್ರಾಣಬಿಟ್ಟ ಶಿಕ್ಷಕಿ