ಬೆಳ್ತಂಗಡಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳ್ತಂಗಡಿ ಸೈಂಟ್ ಮೆರೀಸ್ ಸ್ಕೂಲ್ ವಿದ್ಯಾರ್ಥಿನಿ ಶ್ರೇಯಾ ಡೋಂಗ್ರೆ 622 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಳು. ಅದರೆ 625 ಅಂಕ ಪಡೆಯುತ್ತೇನೆಂಬ ಭರವಸೆಯಲ್ಲಿದ್ದ ವಿದ್ಯಾರ್ಥಿನಿ ಮರುಮೌಲ್ಯಮಾಪನಕ್ಕೆ ಹಾಕಿದಾಗ 625 ಅಂಕ ಪಡೆದು ಇದೀಗ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾಳೆ.
ತಾಲೂಕಿನ ಲಾಯ್ಲ ಗ್ರಾಮದ ವೈದ್ಯರಾದ ಶಶಿಕಾಂತ್ ಡೋಂಗ್ರೆ ಹಾಗೂ ದೀಪಾಲಿ ಡೋಂಗ್ರೆಯವರ ಪುತ್ರಿ ಶ್ರೇಯಾ ಡೋಂಗ್ರೆ ಈ ಬಾರಿಯ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ ತಾಲೂಕಿನ ಜನ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದ್ದಾಳೆ.
ನನಗೆ 622 ಅಂಕ ಬಂದಾಗ ಸ್ವಲ್ಪ ಸಂಶಯ ಉಂಟಾಯಿತು. ಅದರೂ 625 ಅಂಕ ಬರುವ ನಿರೀಕ್ಷೆಯಲ್ಲಿದ್ದೆ. ಇಂಗ್ಲೀಷ್ನಲ್ಲಿ 3 ಅಂಕ ಕಡಿಮೆ ಬಂದ ಬಗ್ಗೆ ಯೋಚಿಸಿ ತಂದೆ ತಾಯಿ ಹಾಗೂ ಶಾಲಾ ಶಿಕ್ಷಕರಲ್ಲಿ ಮಾತನಾಡಿ ಮರುಮೌಲ್ಯಮಾಪನಕ್ಕೆ ಹಾಕಿದೆ. ಅದರ ಫಲಿತಾಂಶ 625 ಅಂಕ ಬಂದಿದೆ. ತುಂಬಾ ಖುಷಿಯಾಗಿದೆ ಎಂದು ಶ್ರೇಯಾ ಸಂತೋಷ ಹಂಚಿಕೊಂಡರು.
ಈ ಬಾರಿಯ ಪರೀಕ್ಷೆ ಮಕ್ಕಳಿಗೆ ತುಂಬಾ ಸವಾಲಿನದ್ದಾಗಿತ್ತು. ಅದರೂ ಪ್ರಯತ್ನ ಪಟ್ಟರೆ ಫಲ ಸಿಗುತ್ತದೆ ಎಂಬುವುದಕ್ಕೆ ಇವಳೇ ಸಾಕ್ಷಿ. ನಮ್ಮ ಮಗಳ ಯಶಸ್ಸಿಗೆ ಶ್ರಮ ಪಟ್ಟ ಶಿಕ್ಷಕರಿಗೆ ಹಾಗೂ ಆಶೀರ್ವದಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಪೋಷಕರು ಸಂತಸ ಹಂಚಿಕೊಂಡಿದ್ದಾರೆ.