ನೆಲ್ಯಾಡಿ(ದಕ್ಷಿಣ ಕನ್ನಡ): ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಸಮೀಪದ ಉದನೆ ಎಂಬಲ್ಲಿನ ತೂಗುಸೇತುವೆಯಲ್ಲಿ ಪುರುಷನ ಒಂದು ಜೊತೆ ಚಪ್ಪಲ್ ಹಾಗೂ ಬ್ಯಾಗ್ ಪತ್ತೆಯಾಗಿದ್ದು, ಆತ ನದಿಗೆ ಹಾರಿರುವ ಶಂಕೆ ಮೂಡಿದೆ.
ಇಂದು ಬೆಳಗ್ಗೆ ಬ್ಯಾಗ್ ಪತ್ತೆಯಾಗಿದೆ. ಇದನ್ನು ಸ್ಥಳೀಯರು ಗಮನಿಸಿದ್ದು, ನೆಲ್ಯಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸೇತುವೆಯಲ್ಲಿ ದೊರೆತಿರುವ ಬ್ಯಾಗ್‌ನಲ್ಲಿ ಒಂದು ಡ್ರೈವಿಂಗ್ ಲೈಸೆನ್ಸ್ ಪತ್ತೆಯಾಗಿದ್ದು, ಅದರಲ್ಲಿ ಆಂಧ್ರ ಪ್ರದೇಶದ ಪುಟ್ಟಪರ್ತಿ ನಿವಾಸಿ ಸುಬ್ರಹ್ಮಣ್ಯಂ ಎಂಬುವರ ಮಗ ರಮಣ ಎಂದು ಇದೆ. ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿರುವ ಡೆತ್‌ನೋಟ್ ಸಹ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೋಟದಲ್ಲಿ ಕಳ್ಳತನ.. ತಿ.ನರಸೀಪುರ ಠಾಣೆಯಲ್ಲಿ ದೂರು ದಾಖಲು
ಮಾತ್ರವಲ್ಲದೇ ಸೆ.15ರಂದು ಧರ್ಮಸ್ಥಳದಿಂದ ಉದನೆಗೆ ಬಸ್ಸಿನಲ್ಲಿ ಪ್ರಯಾಣಿಸಿರುವ ಬಸ್ ಟಿಕೆಟ್ ಸಹ ಪತ್ತೆಯಾಗಿದೆ. ನೆಲ್ಯಾಡಿ ಹೊರಠಾಣೆ ಎಎಸ್‌ಐ ಸೀತಾರಾಮ ಗೌಡ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬ್ಯಾಗ್ ಪರಿಶೀಲನೆ ನಡೆಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.