ಮಂಗಳೂರು: ಪುತ್ತೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಧ್ವನಿಯೆತ್ತಲು ಶೋಭಾ ಕರಂದ್ಲಾಜೆ ಬಾಯಿಗೆ ಬೀಗ ಬಿದ್ದಿದೆ ಎಂದು ಮಾಜಿ ಶಾಸಕಿ, ಕಾಂಗ್ರೆಸ್ ಮುಖಂಡೆ ಶಕುಂತಳಾ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುತ್ತೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕ್ಷೇತ್ರದಲ್ಲಿ ಚೂರಿ ಇರಿತ ಆದಾಗ ಮಾತಾಡಿದ್ದಾರೆ. ತಮ್ಮ ಪಕ್ಷ ಗೆದ್ದಿರುವ ಕ್ಷೇತ್ರಗಳಾದ ಸುಳ್ಯದಲ್ಲಿ ಅಕ್ಷತಾ ಕೊಲೆಯಾದಾಗ, ಪುತ್ತೂರಿನಲ್ಲಿ ಸಾಮೂಹಿಕ ಅತ್ಯಾಚಾರವಾದಗ ಧ್ವನಿಯೆತ್ತುತ್ತಿಲ್ಲ. ಅವರ ಬಾಯಿಗೆ ಈಗ ಯಾಕೆ ಬೀಗ ಬಿದ್ದಿದೆ ಎಂದು ಪ್ರಶ್ನಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ದುಷ್ಕೃತ್ಯ ನಡೆದದ್ದು ಮತ್ತು ಅದನ್ನು ವಿಡಿಯೋ ಮಾಡಿ ಇಟ್ಟುಕೊಂಡಿದ್ದು ಅಪರಾಧ. ಈ ಘಟನೆಯನ್ನು ಸ್ವಯಂಪ್ರೇರಿತ ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಇಲಾಖೆ ಕಾರ್ಯ ಶ್ಲಾಘನೀಯ ಎಂದರು. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮೊದಲಾದವರು ಉಪಸ್ಥಿತರಿದ್ದರು.