ಬಂಟ್ವಾಳ: ಬಿ.ಸಿ.ರೋಡ್-ಜಕ್ರಿಬೆಟ್ಟು ಹೆದ್ದಾರಿ ಕಾಮಗಾರಿಯ ವೇಳೆ ಮಯ್ಯರಬೈಲು ಎಂಬಲ್ಲಿ ಸ್ಥಳೀಯ ನಿವಾಸಿಯೊಬ್ಬರು ತಮ್ಮ ಮನೆಯ ಮುಂದೆ ತೆಗೆದ ಚರಂಡಿಗೆ ಕಾಂಕ್ರೀಟ್ ಹಾಕಿಲ್ಲ ಎಂದು ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು.
ಮೇ 17 ರ ತಡರಾತ್ರಿ ಸುರಿದ ಮಳೆಗೆ ಮಯ್ಯರಬೈಲು ನಿವಾಸಿ ಉದಯಕುಮಾರ್ ರಾವ್ ಅವರ ಮನೆಯ ಆವರಣಕ್ಕೆ ನೀರು ಹಾಗೂ ಮಣ್ಣು ಕೊಚ್ಚಿಕೊಂಡು ಬಂದಿತ್ತು. ಸಭೆ, ಸಮಾರಂಭಗಳಲ್ಲಿ ಅಲಂಕಾರ ಮಾಡುವ ವೃತ್ತಿ ನಿರ್ವಹಿಸುವ ಅವರ ವಸ್ತುಗಳಿಗೆ ಇದರಿಂದ ಹಾನಿಯಾಗಿತ್ತು. ಚರಂಡಿ ಅಗೆದು ಕಾಂಕ್ರೀಟ್ ಅಳವಡಿಸಬೇಕು ಎಂದು ಒತ್ತಡ ಹಾಕಿದ ಪರಿಣಾಮ ಕಾಮಗಾರಿ ನಿರ್ವಹಿಸುವ ಸಂಸ್ಥೆಯವರು ಕೇವಲ ಚರಂಡಿ ತೆಗೆದು ಹೋಗಿದ್ದರು.
ಉದಯಕುಮಾರ್ ಅವರ ಕಾಲಿಗೆ ಶಸ್ತ್ರ ಚಿಕಿತ್ಸೆ ನಡೆದಿದ್ದು, ಮೋರಿ ಹಾಕದೆ ಮನೆಗೆ ಹೋಗುವುದಿಲ್ಲ ಎಂದು ರಸ್ತೆಯಲ್ಲೇ ಕುರ್ಚಿ ಹಾಕಿ ಕುಳಿತು ಪ್ರತಿಭಟಿಸಿದರು. ಈ ವಿಚಾರ ಪೊಲೀಸರಿಗೆ ತಿಳಿದು ಸ್ಥಳಕ್ಕಾಗಮಿಸಿ ಮೋರಿ ಹಾಕುವಂತೆ ಕಾಮಗಾರಿ ನಡೆಸುವವರಿಗೆ ಸೂಚಿಸಿ, ಬಳಿಕ ಅಳವಡಿಸಲಾಯಿತು.