ಮಂಗಳೂರು: ದೇಶದ ರೈತಾಪಿ ವರ್ಗದ ವಿರುದ್ಧ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದು, ಎಸ್ಡಿಪಿಐ ಇದನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ವಿಧೇಯಕಗಳು ಜಾರಿಯಾದರೆ ಈ ದೇಶದ ಬೆನ್ನೆಲುಬಾಗಿರುವ ರೈತಾಪಿ ವರ್ಗ ಮಾತ್ರವಲ್ಲ, ಜನಸಾಮಾನ್ಯರೂ ಕಷ್ಟ ಅನುಭವಿಸಲಿದ್ದಾರೆ ಎಂದು ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ದೂರಿದರು.
ಕೃಷಿ ವಿರೋಧಿ ಕಾನೂನು ಹಿಂಪಡೆಯಿರಿ, ರೈತರ ಬೇಡಿಕೆಗಳನ್ನು ಈಡೇರಿಸಿ ಎಂದು ಆಗ್ರಹಿಸಿ ಮಂಗಳೂರು ಮನಪಾ ಮುಂಭಾಗ ನಡೆದ ರೈತ ಐಕ್ಯತಾ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಮುಂದುವರಿಯುತ್ತಿರುವ ರಾಷ್ಟ್ರವಾಗಿದೆ. ನಮ್ಮನ್ನಾಳುವ ಬಿಜೆಪಿ ಸರ್ಕಾರ ರೈತವಿರೋಧಿ, ಜನವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ ದೇಶವನ್ನು ಇನ್ನಷ್ಟು ಹಿಂದುಳಿದ ದೇಶವಾಗಿ ಮಾರ್ಪಡಿಸುತ್ತಿದೆ ಎಂದು ಕಿಡಿಕಾರಿದರು.
ಫ್ಯಾಸಿಸ್ಟ್ ಶಕ್ತಿಗಳು, ಸಂಘ ಪರಿವಾರದವರು, ಬಿಜೆಪಿಗರ ಕೈಗೆ ದೇಶದ ಆಡಳಿತ ಚುಕ್ಕಾಣಿ ದೊರಕಿದರೆ ಈ ದೇಶಕ್ಕೆ ಉಳಿಗಾಲವಿಲ್ಲ ಎಂದು ಹಿಂದೆಯೇ ಎಸ್ ಡಿಪಿಐ ಎಚ್ಚರಿಕೆ ನೀಡಿತ್ತು. ಆದರೆ ಬಿಜೆಪಿ ಬೆಂಬಲಿಗರು ಮತ್ತೊಮ್ಮೆ ದೇಶದ ಆಡಳಿತ ಚುಕ್ಕಾಣಿಯನ್ನು ಎರಡನೇ ಬಾರಿಗೆ ಅವರ ಕೈಗೇ ನೀಡಿದ್ದಾರೆ. ಇದರಿಂದ ದೇಶ ಮತ್ತಷ್ಟು ಸಂಕಷ್ಟದ ಸುಳಿಗೆ ಸಿಲುಕಿದೆ. ಅಲ್ಲದೆ ದೇಶದ ಜಾತ್ಯತೀತ ವ್ಯವಸ್ಥೆ, ಪ್ರಜಾಪ್ರಭುತ್ವ ವ್ಯವಸ್ಥೆಗೂ ಇದರಿಂದ ಮಾರಕವಾಗಿದೆ ಎಂದರು.
ದೇಶಾದ್ಯಂತ ನಡೆಯುವ ರೈತ ಚಳುವಳಿಯನ್ನು ಬೆಂಬಲಿಸಿ ಎಸ್ಡಿಪಿಐ ದ.ಕ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಬೈಕ್ ಜಾಥಾ, ಕಾಲ್ನಡಿಗೆ ಜಾಥಾ ಹಾಗೂ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿತ್ತು.