ಮಂಗಳೂರು: ಲೋಕಸಭಾ ಚುನಾವಣೆಯ ಸಂದರ್ಭ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಗರದ ನಾಲ್ವರು ರೌಡಿಗಳನ್ನು ದ.ಕ ಜಿಲ್ಲೆಯಿಂದ ಗಡಿಪಾರು ಮಾಡಿ ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.ಜತೆಗೆ ಇನ್ನೂ ಏಳು ಮಂದಿ ರೌಡಿಗಳ ಗಡಿಪಾರು ಪ್ರಕ್ರಿಯೆ ಪ್ರಗತಿಯಲ್ಲಿದೆ.
ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯ ರೌಡಿಗಳ ಪಟ್ಟಿಯಲ್ಲಿರುವ ಅರ್ಜುನ್, ಕೌಶಿಕ್ ಮತ್ತು ಅಶ್ರಫ್ ಹಾಗೂ ಉರ್ವ ಪೊಲೀಸ್ ಠಾಣೆಯ ರೌಡಿಗಳ ಪಟ್ಟಿಯಲ್ಲಿರುವ ರಂಜಿತ್ ಎಂಬವರನ್ನು ಗಡೀಪಾರು ಮಾಡಲಾಗಿದೆ. ಈ ನಾಲ್ವರನ್ನೂ ಜಿಲ್ಲೆಯಿಂದ ಹೊರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರ್ಜುನ್‌ನನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿ, ಕೌಶಿಕ್‌ನನ್ನು ಉಡುಪಿ ಮತ್ತು ಕಾರ್ಕಳ ವ್ಯಾಪ್ತಿಗೆ, ಅಶ್ರಫ್‌ನನ್ನು ಕೋಲಾರ ಜಿಲ್ಲೆಗೆ ಹಾಗೂ ರಂಜಿತ್‌ನನ್ನು ಬೆಂಗಳೂರು ನಗರದ ಹೆಬ್ಬಾಳ ವ್ಯಾಪ್ತಿಗೆ ಗಡೀಪಾರು ಮಾಡಿ ಆದೇಶ ಹೊರಡಿಸಲಾಗಿದೆ.ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳ ರೌಡಿ ಪಟ್ಟಿಯಲ್ಲಿ ಹೆಸರಿರುವ ಇನ್ನೂ ಏಳು ಮಂದಿಯನ್ನು ಜಿಲ್ಲೆಯಿಂದ ಹೊರಹಾಕುವ ಪ್ರಕ್ರಿಯೆ ಆರಂಭಿಸಲಾಗಿದೆ.
ಎಸಿಪಿಗಳು ಸಲ್ಲಿಸಿರುವ ವರದಿ ಆಧರಿಸಿ ಡಿಸಿಪಿ ಶಿಫಾರಸು ಸಲ್ಲಿಸಿದ್ದಾರೆ. ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ ಬಳಿಕ ಈ ಏಳು ಮಂದಿಯನ್ನೂ ಜಿಲ್ಲೆಯಿಂದ ಹೊರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.