ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರಗಳಲ್ಲೊಂದಾದ ಮೂಲ್ಕಿಯ ಶ್ರೀಕ್ಷೇತ್ರ ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ಹೆಸರನ್ನು ಗೂಗಲ್ ಮ್ಯಾಪ್‌ನಲ್ಲಿ ಕಿಡಿಗೇಡಿಗಳು ಬದಲಾಯಿಸಿದ ಘಟನೆ ನಡೆದಿದೆ. ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಹಝರತ್ ಬಪ್ಪ ಬ್ಯಾರಿ ದುರ್ಗಾಪರಮೇಶ್ವರಿ ಎಂದು ಹೆಸರು ಬದಲಿಸಿದ್ದಾರೆ.
ಗೂಗಲ್ ಮ್ಯಾಪ್‌ನಲ್ಲಿ ಹೆಸರು ಬದಲಾಯಿಸಿದ ಬಗ್ಗೆ ದೇವಸ್ಥಾನದ ಆಡಳಿತ ಸಮಿತಿ ಮಂಗಳೂರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಗೂಗಲ್ ಮ್ಯಾಪ್‌ನಲ್ಲಿ ಕಿಡಿಗೇಡಿಗಳು ಸಾಮರಸ್ಯಕ್ಕೆ ಧಕ್ಕೆ ತರುವ ದುರುದ್ದೇಶದಿಂದ ಈ ಕೃತ್ಯವೆಸಗಿದ್ದಾರೆ. ಘಟನೆ ಗಮನಕ್ಕೆ ಬಂದ ತಕ್ಷಣ ದೇವಸ್ಥಾನದ ಆಡಳಿತ ಮಂಡಳಿ ಮ್ಯಾಪ್‌ನಲ್ಲಿ ಮರು ನಾಮಕರಣ ಪ್ರಕ್ರಿಯೆ ನಡೆಸಿ, ಗೂಗಲ್ ರಿವ್ಯೂ ಬಳಿಕ ಹೆಸರು ಬದಲಾವಣೆಯಾಗಲಿದೆ.
ಬಪ್ಪನಾಡು ದುರ್ಗಾಪರಮೇಶ್ವರಿ ದೇವರು ಬಪ್ಪಬ್ಯಾರಿ ಎಂಬ ಮುಸ್ಲಿಂ ವ್ಯಕ್ತಿಗೆ ಒಲಿದದ್ದು ಮತ್ತು ಬಪ್ಪ ಬ್ಯಾರಿಯ ಮೂಲಕ ಈ ದೇವಸ್ಥಾನ ನಿರ್ಮಾಣವಾಗಿರುವ ಐತಿಹ್ಯವಿದೆ. ಇತ್ತೀಚಿಗೆ ಈ ದೇವಸ್ಥಾನದ ಜಾತ್ರೆಯಲ್ಲಿ ಹಿಂದೂ ಸಂಘಟನೆಗಳು ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡದೆ ವಿವಾದವೇರ್ಪಟ್ಟಿತ್ತು. ಇದೀಗ ಕಿಡಿಗೇಡಿಗಳು ಗೂಗಲ್ ಮ್ಯಾಪ್‌ನಲ್ಲಿ ಹೆಸರು ಬದಲಾಯಿಸಿದ್ದಾರೆ.
ಭಾಗಶಃ ಸರಿಯಾದ ಹೆಸರು: ಗೂಗಲ್ ಮ್ಯಾಪ್‌ನಲ್ಲಿ ಕಿಡಿಗೇಡಿಗಳಿಂದ ಬದಲಾದ ಶ್ರೀಕ್ಷೇತ್ರ ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ಹೆಸರನ್ನು ಗೂಗಲ್ ಸಂಸ್ಥೆ ಸರಿಪಡಿಸಿದೆ. ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಹಝರತ್ ಬಪ್ಪ ಬ್ಯಾರಿ ದುರ್ಗಾಪರಮೇಶ್ವರಿ ಎಂದು ಬದಲಿಸಿದ ಬಗ್ಗೆ ದೂರು ನೀಡಿದ ಬಳಿಕ ಗೂಗಲ್ ಮ್ಯಾಪ್‌ನಲ್ಲಿ ಬಪ್ಪನಾಡು ದುರ್ಗಾಪರಮೇಶ್ವರಿ ಟೆಂಪಲ್ ಎಂದು ಕಾಣಿಸಿಕೊಳ್ಳುತ್ತಿದೆ. ಆದರೆ, ಕೆಳಗೆ ಮಾಹಿತಿ ನೀಡುವ ಜಾಗದಲ್ಲಿ ಇನ್ನೂ ಹಜ್ರತ್ ಬಪ್ಪ ಬ್ಯಾರಿ ದುರ್ಗಾಪರಮೇಶ್ವರಿ ಟೆಂಪಲ್ ಎಂದು ಇದೆ.
ಓದಿ: ಅಲೇಲೇಲೇ ಏನ್ ಆರ್ಭಟ.. ಕುರುಕ್ಷೇತ್ರದಲ್ಲಿ ದುರ್ಯೋಧನನ ಗೆಟಪ್ ಹಾಕಿದ ಕೃಷಿ ಅಧಿಕಾರಿ..