ಮಂಗಳೂರು: ಸಿಎಂ ಯಡಿಯೂರಪ್ಪನವರ ಸೂಚನೆಯ ಮೇರೆಗೆ ಉಡುಪಿ, ಮಂಗಳೂರಿನಲ್ಲಿ ಪ್ರವಾಹ ಸೇರಿದಂತೆ ಸಮಸ್ಯೆಗಳ ಪರಿಹಾರಕ್ಕೆ ಚರ್ಚಿಸಲು ಆಗಮಿಸಿದ್ದೇನೆ. ಯಾವುದೇ ಸಮಸ್ಯೆಗಳಿಲ್ಲದೆ ಪ್ರವಾಹದ ಸಂಕಷ್ಟಗಳನ್ನು ಎದುರಿಸುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಡಿಸಿ ಕಚೇರಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ಜೊತೆಯಲ್ಲಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಸಚಿವರು, ಡಿಸಿ ಹಾಗೂ ಇಲಾಖಾ ಅಧಿಕಾರಿಗಳ ಮಾಹಿತಿಯಂತೆ ದ.ಕ. ಜಿಲ್ಲೆಯಾದ್ಯಂತ ಸುಮಾರು 750 ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಎಂಬುದು ಮೇಲ್ನೋಟದ ಅಂಕಿ ಅಂಶ. ಸುಮಾರು ಸಾವಿರದಷ್ಟು ಮನೆಗಳು ಹಾನಿಗೊಳಗಾಗಿವೆ ಎಂದು ಮಾಹಿತಿ ನೀಡಿದ್ರು.
ಸಿಎಂ ಯಡಿಯೂರಪ್ಪನವರ ನಿರ್ದೇಶನದಂತೆ 10 ಸಾವಿರ ರೂ.ಗಳನ್ನು ಈಗಾಗಲೇ ಕೊಡಲಾಗಿದೆ. ಅಲ್ಲದೆ ಈವರೆಗೆ ಪೂರ್ಣ ಮನೆ ಕಳೆದುಕೊಂಡವರಿಗೆ ಸರ್ಕಾರ 95 ಸಾವಿರ ರೂ. ಪರಿಹಾರ ನೀಡುತ್ತಿತ್ತು. ಆದರೆ ಈಗ 5 ಲಕ್ಷ ರೂ. ವೆಚ್ಚದಲ್ಲಿ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ಮಾಡಲಾಗಿದೆ. ಅಂತಹ ಮನೆಗಳನ್ನು ಗುರುತಿಸುವಂತಹ ಕೆಲಸ ಆಗಿದೆ. ತುರ್ತಾಗಿ ಮನೆ ನಿರ್ಮಾಣ ಮಾಡಲು ಸಾಧ್ಯವಾಗದವರಿಗೆ 8-10 ತಿಂಗಳ ಕಾಲ ಪ್ರತೀ ತಿಂಗಳು 5 ಸಾವಿರ ರೂ. ಬಾಡಿಗೆ ಕೊಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಮುಖ್ಯಮಂತ್ರಿಯವರ ಆದೇಶದ ಮೇರೆಗೆ ಶೆಡ್ಗಳ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಒಟ್ಟಾರೆ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ 40-50 ಸಾವಿರ ಮನೆಗಳು ಬಿದ್ದಿರುವ ಸಾಧ್ಯತೆ ಇದೆ. ತಲಾ ಐದು ಲಕ್ಷ ರೂ. ನೀಡಿ ಸರ್ಕಾರ ಅವುಗಳನ್ನು ಪುನರ್ನಿರ್ಮಾಣ ಮಾಡಲು ನಿರ್ಧರಿಸಿದೆ ಎಂದರು.
ಸುಳ್ಯ ಶಾಸಕ ಅಂಗಾರ ಹಾಗೂ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸಚಿವ ಸ್ಥಾನ ದೊರಕಿಲ್ಲ ಎಂದು ಕಾರ್ಯಕರ್ತರು ಮುನಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಿನ್ನೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸಂದರ್ಭ ಈ ಬಗ್ಗೆ ಮಾತನಾಡಿದ್ದೇವೆ. ಅಂಗಾರ ಹಾಗೂ ಹಾಲಾಡಿ ಇಬ್ಬರೂ ಹಿರಿಯರು. ಸಚಿವ ಸಂಪುಟದಲ್ಲಿ ಅವರಿಗೆ ಸ್ಥಾನ ದೊರಕಬೇಕೆಂದು ಕಾರ್ಯಕರ್ತರು ಹಾಗೂ ಅನೇಕರ ಅಭಿಪ್ರಾಯವಿದೆ. ಸ್ವಾಭಾವಿಕವಾಗಿ ಸಂಪುಟ ವಿಸ್ತರಣೆಯಾದ ಸಂದರ್ಭ 17 ಜನರಿಗೆ ಅವಕಾಶ ದೊರಕಿದೆ. ಮಿಕ್ಕ ಕೆಲವು ಖಾತೆಗಳು ಬೇರೆ ಬೇರೆ ಕಾರಣಗಳಿಂದ ಬಾಕಿ ಉಳಿದಿವೆ. ಎಲ್ಲರೂ ಒಟ್ಟಾಗಿದ್ದೇವೆ, ಗೊಂದಲಗಳಿಲ್ಲ. ಕಾರ್ಯಕರ್ತರ ನೋವು ಸರ್ಕಾರ ಹಾಗೂ ಮುಖ್ಯಮಂತ್ರಿಗೆ ಅರ್ಥವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ಅಲ್ಲದೆ ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಕುಸಿತದಿಂದ 26 ಮನೆಗಳಿಗೆ ಹಾನಿಯಾಗಿದ್ದು, ಮುಂದೆ ಈ ಡಂಪಿಂಗ್ ಯಾರ್ಡ್ಗೆ ಕಾಯಕಲ್ಪ ಒದಗಿಸುವ ಬಗ್ಗೆ ಹಾಗೂ ಕೃಷಿ ಹಾನಿಯಲ್ಲಿ ಪರಿಹಾರ ಒದಗಿಸುವಲ್ಲಿ ಮರಕ್ಕೊಂದರಂತೆ ಬೆಲೆ ನಿಗದಿ ಮಾಡಬೇಕು ಎಂಬುದರ ಕುರಿತು, ಕಡಲ್ಕೊರೆತ ಪ್ರದೇಶಗಳಿಗೆ ಶಾಶ್ವತ ತಡೆಗೋಡೆ ನಿರ್ಮಾಣದ ಬಗ್ಗೆಯೂ ಚರ್ಚೆ ನಡೆಯಿತು. ಈ ಎಲ್ಲಾ ಚರ್ಚೆಯ ಪ್ರಮುಖ ವಿವರವನ್ನು ಪಟ್ಟಿ ಮಾಡಿಕೊಂಡ ಸಚಿವ ಪೂಜಾರಿ ಅವರು ಮುಖ್ಯಮಂತ್ರಿಗೆ ಈ ಬಗ್ಗೆ ವರದಿ ಒಪ್ಪಿಸುವ ಭರವಸೆ ನೀಡಿದರು.