ಬಂಟ್ವಾಳ: ಕೋವಿಡ್ನಿಂದ ಮೃತಪಟ್ಟ ಮಹಿಳೆಯ ಶವ ಸಂಸ್ಕಾರದ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ನಡೆದುಕೊಂಡ ರೀತಿ ಸರಿಯಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶೇಷ ಸಂದರ್ಭದಲ್ಲಿ ಯಾವ ಆಸ್ಪತ್ರೆಯಲ್ಲಿ ಸಾವು ಸಂಭವಿಸುತ್ತದೆಯೋ ಆ ಆಸ್ಪತ್ರೆಯ ಹತ್ತಿರದಲ್ಲಿರುವ ಚಿತಾಗಾರದಲ್ಲೇ ಶವ ಸಂಸ್ಕಾರ ನಡೆಸಬೇಕು. ವಿದ್ಯುತ್ ಚಿತಾಗಾರ ಇದ್ದರೆ ಅದಕ್ಕೆ ಮೊದಲ ಆದ್ಯತೆ ನೀಡಬೇಕು. ಚುನಾಯಿತ ಪ್ರತಿನಿಧಿಗಳ ಪ್ರಭಾವಕ್ಕೆ ಮಣಿದು ಪಾರ್ಥಿವ ಶರೀರಕ್ಕೆ ಅವಮಾನ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾನ್ಯ ಜನರಿಗೆ ಈ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಅಂದ ಮಾತ್ರಕ್ಕೆ ಜನಪ್ರತಿನಿಧಿಗಳೂ ಸಾಮಾನ್ಯ ಜ್ಞಾನ ಇಲ್ಲದಂತೆ ವರ್ತಿಸುವುದು ಸರಿಯಲ್ಲ. ಪಾರ್ಥಿವ ಶರೀರಕ್ಕೆ ಅದರದ್ದೇ ಆದ ಗೌರವ ಇರುತ್ತದೆ. ಅದನ್ನು ಗೌರವಿಸುವುದು ಮಾನವನ ಕರ್ತವ್ಯ ಎಂದರು.
ಎಲ್ಲವೂ ಗೊಂದಲಮಯ ಆದ ನಂತರ ಖಾಸಗಿ ಜಾಗ ಬೇಕಾದರೂ ನೀಡುತ್ತೇನೆ ಎನ್ನುವ ಮೂಲಕ ಗೊಂದಲಕ್ಕೆ ತೇಪೆ ಹಚ್ಚಿದರೆ ಮಣ್ಣುಪಾಲಾದ ಗೌರವ ಮರಳಿ ಬರುವುದಿಲ್ಲ. ಈಗಾಗಲೇ ಕಾಂಗ್ರೆಸ್ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಚರ್ಚಿಸಿದೆ. ಆಗಿರುವ ಪ್ರಮಾದವನ್ನು ಜಿಲ್ಲಾಧಿಕಾರಿಗಳು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.