ಮಂಗಳೂರು: ಯೋಗ ಮಾಡುವ ವೇಳೆ ಜಾರಿ ಬಿದ್ದು ಯೆನೆಪೊಯ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಪ್ರಜ್ಞಾಹೀನ ಪರಿಸ್ಥಿತಿಗೆ ತಲುಪಿದ್ದಾರೆ.
ಈ ವಿಚಾರ ತಿಳಿದ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಫರ್ನಾಂಡಿಸ್ ಕುಟುಂಬದವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಆರೋಗ್ಯ ವಿಚಾರಿಸಿದ್ದಾರೆ.
ಭಾನುವಾರ ಬೆಳಗ್ಗೆ ಯೋಗ ಮಾಡುವ ಸಂದರ್ಭ ಆಸ್ಕರ್ ಫರ್ನಾಂಡಿಸ್ ಅವರು ನಿಯಂತ್ರಣ ತಪ್ಪಿ ಜಾರಿ ಬಿದ್ದಿದ್ದರು. ಬಳಿಕ ಯಾವುದೇ ಗಾಯವಾಗಿಲ್ಲ ಎಂದು ಇದನ್ನು ನಿರ್ಲಕ್ಷಿಸಿದ್ದರು. ಅದೇ ದಿನ ಸಂಜೆ ಡಯಾಲಿಸಿಸ್ಗೆಂದು ಯೆನೆಪೊಯ ಆಸ್ಪತ್ರೆಗೆ ತೆರಳಿದ್ದರು.
ಈ ಸಂದರ್ಭ ಪರೀಕ್ಷಿಸಿದಾಗ ತಲೆಯ ಒಳಭಾಗಕ್ಕೆ ಪೆಟ್ಟು ಬಿದ್ದಿದ್ದು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಆಸ್ಕರ್ ಫರ್ನಾಂಡಿಸ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಯೋಗ ಮಾಡುವ ವೇಳೆ ಜಾರಿಬಿದ್ದ ಕಾಂಗ್ರೆಸ್ ಹಿರಿಯ ಮುಖಂಡ: ಆಸ್ಕರ್ ಫೆರ್ನಾಂಡಿಸ್ ಆಸ್ಪತ್ರೆಗೆ ದಾಖಲು