ಪುತ್ತೂರು: ಒಂಬತ್ತು ವರ್ಷದ ಬಾಲಕನೋರ್ವ ನಲಿದಾಡಬೇಕಾಗಿದ್ದ ವಯಸ್ಸಲ್ಲೇ ಎಂಡೋ ಸಲ್ಫಾನ್ ರೋಗಕ್ಕೆ (Endosulfan) ಗುರಿಯಾಗಿ ಬದುಕು ಕಳೆದುಕೊಂಡಿದ್ದಾನೆ.
ದಿನಗೂಲಿ ಮಾಡುವ ಅಪ್ಪ, ತನ್ನ ಮಗ ಇಂದು ಸರಿಹೋಗ್ತಾನೆ, ನಾಳೆ ಸರಿಹೋಗ್ತಾನೆ ಎಂಬ ನಿರೀಕ್ಷೆಯ ಕಂಗಳನ್ನು ಹೊತ್ತು ದುಡಿದ ಹಣವನ್ನು ಮಗನ ಔಷಧಿಗೆ ವ್ಯಯಿಸುತ್ತಿದ್ದಾರೆ. ದಿನನಿತ್ಯ ಮಗನ ಜೀವ ಭಯದಲ್ಲಿಯೇ ಕಾಲ ಕಳೆಯುತ್ತಿರುವ ಕುಟುಂಬಕ್ಕೆ ಸರ್ಕಾರ, ಜನಪ್ರತಿನಿಧಿಗಳು ಕೈಕೊಟ್ಟಿದ್ದು ಸಹಾಯಕ್ಕಾಗಿ ಜನರ ಮೊರೆ ಹೋಗಿದ್ದಾರೆ.
ಮುದ್ದು ಮುಖದ ಬಾಲಕನ ಹೆಸರು ಗಗನ್. ಹುಟ್ಟಿ 49 ದಿನವಾಗುತ್ತಲೇ ಅಸ್ತಮಾ ಕಾಯಿಲೆಯಿಂದ ಬಳಲಲಾರಂಭಿಸಿದ್ದ. ಮುಂದೆ ಮಧುಮೇಹ ಕಾಯಿಲೆಗೂ ತುತ್ತಾದ. ಸದ್ಯ ಯಾವಕ್ಷಣದಲ್ಲಿ ಗಗನ್ಗೆ ಏನಾಗುತ್ತೋ ಅನ್ನೋದನ್ನು ಊಹಿಸೋಕೆ ಆಗಲ್ಲ. ತಲೆತಿರುಗಿ ಬೀಳದೆ, ಕೋಮಾಕ್ಕೆ ಜಾರದೆ ಸೇಫ್ ಆಗಿ ಇರುತ್ತೇನೆ ಅನ್ನೋ ಯಾವ ಗ್ಯಾರೆಂಟಿನೂ ಇಲ್ಲ. ಮಗನ ಕಾಯಿಲೆ ವಾಸಿಗೆ ತಂದೆ ಔಷಧಿಗಾಗಿ ಹಣ ಹೊಂದಿಸಲು ಪರದಾಡುವ ಸ್ಥಿತಿ ನೋಡಿದ್ರೆ ಎಂತವರ ಕರುಳೂ ಕೂಡಾ ಹಿಂಡುವಂತಿದೆ. ಆದ್ರೆ ಸರ್ಕಾರ ಮತ್ತು ಅಧಿಕಾರಿಗಳಿಗೆ ಈ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ.
ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ:
ಬಾಲಕನ ಪರಿಸ್ಥಿತಿ ನೋಡಿ ಆರೋಗ್ಯ ಇಲಾಖೆ ಎಂಡೋ ಸಂತ್ರಸ್ತರ ಪಟ್ಟಿಗೆ ಸೇರಿಸಿಕೊಂಡು, ನೀಲಿ ಕಾರ್ಡನ್ನು ಕೂಡಾ ನೀಡಿದೆ. ಆದರೆ ಕಾರ್ಡ್ ಮೂಲಕ ನೀಡಬೇಕಾದ ಯಾವುದೇ ಸೌಲಭ್ಯವನ್ನು ಇದುವರೆಗೂ ಇಲಾಖೆ ನೀಡಿಲ್ಲ. ಇದಿಷ್ಟೇ ಅಲ್ಲ, ಮಗನ ಚಿಕಿತ್ಸೆಗೆ ನೆರವು ನೀಡುವಂತೆ ಈ ಹಿಂದಿನ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ಸ್ಥಳೀಯ ಶಾಸಕ ಸೇರಿದಂತೆ ಹಲವರಿಗೆ ಮನವಿ ಮಾಡಿದ್ದರು. ಆದ್ರೆ ಅವರೂ ಸರಿಯಾಗಿ ಸ್ಪಂದಿಸಿಲ್ಲ.
ಮನೆಯಲ್ಲಿ ಪುಸ್ತಕ ಇರಬೇಕಾದ ಜಾಗದಲ್ಲಿ ಔಷಧಗಳ ರಾಶಿಯೇ ಇದೆ. ನಗುನಗುತ್ತಾ ಆಡೋಣಾ ಎಂದರೆ ಇನ್ಸುಲಿನ್‌ನ ನೋವು. ಹೆಚ್ಚು ನಡೆಯೋಕೆ ಆಗಲ್ಲ. ಈತನೊಳಗಿರುವ ನೋವು ಅಷ್ಟಿಷ್ಟಲ್ಲ. ಚಿಗುರಬೇಕಿದ್ದ ಕನಸುಗಳು ಅರ್ಧದಲ್ಲೇ ಕಮರಿವೆ. ಮಗನ ಪರಿಸ್ಥಿತಿ ಕಂಡು ದಿನೇ ದಿನೇ ಕಣ್ಣೀರಲ್ಲೇ ಬದುಕು ಕಳೆಯುತ್ತಿದ್ದಾರೆ ಹೆತ್ತವರು. ಆದರೆ ಕ್ಯಾರೆನ್ನದ ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಕುಟುಂಬ ಸಹಾಯಹಸ್ತಕ್ಕಾಗಿ ಕೈಚಾಚಿದೆ.