ಬಂಟ್ವಾಳ: ಕಳೆದ ಆರೇಳು ವರ್ಷಗಳಿಂದ ರಾಜ್ಯದಲ್ಲಿ ವಸತಿ ಯೋಜನೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು, ಅನುದಾನವನ್ನೇ ಇಟ್ಟಿರಲಿಲ್ಲ. ಈಗ ಇಡೀ ರಾಜ್ಯದಲ್ಲಿ 10 ಲಕ್ಷ ಮನೆಗಳ ನಿರ್ಮಾಣಕ್ಕೆ ಯೋಜನೆ ಕಲ್ಪಿಸಲಾಗುವುದು ಹಾಗೂ ಈ ವರ್ಷದ ಜುಲೈ ತಿಂಗಳೊಳಗೆ 97 ಸಾವಿರ ಕುಟುಂಬಗಳಿಗೆ ನಿವೇಶನ ಹಂಚಲಾಗುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಶುಕ್ರವಾರ ಬಂಟ್ವಾಳದ ನರಿಕೊಂಬು ಶ್ರೀ ವೀರಭದ್ರ ಕ್ಷೇತ್ರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದು ಅಡಿ ಜಾಗವನ್ನೂ ತೆಗೆದುಕೊಳ್ಳದೆ 1 ಲಕ್ಷ ಮನೆಗಳ ನಿರ್ಮಾಣಕ್ಕೆ ಕೇಂದ್ರದಿಂದ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆಗ ದ.ಕ.ಜಿಲ್ಲೆಯವರೇ ವಸತಿ ಸಚಿವರಾಗಿದ್ದರು. ಆದ್ರೆ ಅವರು ಎನೂ ಮಾಡಲಿಲ್ಲ ಎಂದು ದೂರಿದರು.
ಓದಿ-ಸಿ.ಪಿ.ಯೋಗೇಶ್ವರ್ 'ಆಪರೇಷನ್ ಕಮಲ' ಮಾಡಲು ಶ್ರಮ ವಹಿಸಿದ್ದಾರೆ: ಎಂಟಿಬಿ ನಾಗರಾಜ್
ಸದ್ಯ, 330 ಎಕರೆ ಜಾಗ ತೆಗೆದುಕೊಂಡು 47 ಸಾವಿರ ಮನೆಗಳನ್ನು ಕಟ್ಟುತ್ತಿದ್ದೇವೆ. ಬಿಎಸ್ವೈ ಅವರು ಸಿಎಂ ಆದ ಬಳಿಕ ಒಂದೂ ಮನೆ ಕೊಟ್ಟಿಲ್ಲ ಎಂಬ ಕೂಗು ಇದ್ದು, ಒಟ್ಟು 10 ಲಕ್ಷ ಮನೆಗಳ ಗುರಿ ಇದೆ. 3560 ಎಕರೆಗೂ ಮಿಕ್ಕಿ ಗ್ರಾಮಾಂತರ ಪ್ರದೇಶಗಳಲ್ಲಿ ನಿವೇಶನ ಹಂಚಿಕೆಗೆ ಜಾಗ ಖರೀದಿಸಲಾಗಿದ್ದು, ಅಲ್ಲಿ ಮೂಲಸೌಕರ್ಯಕ್ಕೆ ಬೇಕಾದ ಅನುದಾನವನ್ನು ಬಜೆಟ್ನಲ್ಲಿ ಸೇರ್ಪಡೆ ಮಾಡಲಾಗುತ್ತದೆ ಎಂದರು.
ವಸತಿ ಯೋಜನೆಯಲ್ಲಿನ ಎಲ್ಲಾ ಅವ್ಯವಹಾರಗಳ ವಿರುದ್ಧ ಕ್ರಮಕೈಗೊಳ್ಳುವ ಕೆಲಸ ಮಾಡಿದ್ದೇನೆ. ದ.ಕ, ಉತ್ತರ ಕನ್ನಡ ಭಾಗದಲ್ಲಿ ವಸತಿ ಯೋಜನೆಯಲ್ಲಿ ಹೆಚ್ಚಿನ ಅವ್ಯವಹಾರ ನಡೆಯದೇ ಇರುವುದು ಹೆಮ್ಮೆಯ ಸಂಗತಿ. 8,500ಕ್ಕೂ ಅಧಿಕ ಎಕರೆ ಜಾಗದಲ್ಲಿ ಸ್ಲಮ್ಗಳಲ್ಲಿ ವಾಸಿಸುವ 3.12 ಲಕ್ಷ ಕುಟುಂಬಗಳಿಗೆ ಶೀಘ್ರದಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.