ಮಂಗಳೂರು : ನಗರದ ತೋಕೂರು ಎಂಬಲ್ಲಿ ಪಕ್ಕದ ಮನೆಯಾತನೇ ಮನೆಯೊಂದರ ಹಂಚು ತೆಗೆದು 11 ಲಕ್ಷ ರೂ. ಮೌಲ್ಯದ ನಗ-ನಗದು ಕಳವುಗೈದಿರುವ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಪಣಂಬೂರು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಕಳ್ಳತನವಾದ ಮನೆಯ ನೆರೆಮನೆಯ ನಿವಾಸಿ ಎಂದು ತಿಳಿದು ಬಂದಿದೆ. ಈತ ಆ ಮನೆಯವರೊಂದಿಗೆ ಬಹಳ ಆತ್ಮೀಯತೆಯಿಂದಿದ್ದು, ಆ ಮನೆಯ ಆಗು ಹೋಗುಗಳನ್ನು ತಿಳಿದುಕೊಂಡಿದ್ದನು. ಹಣಕಾಸಿನ ತೊಂದರೆಯಲ್ಲಿದ್ದ ಆರೋಪಿ ಪಕ್ಕದ ಮನೆಯವರು 2 ದಿನಗಳ ಕಾಲ ಮನೆಯಲ್ಲಿ ಇಲ್ಲದ ಸಂದರ್ಭ ನೋಡಿ ಮನೆಯ ಹೆಂಚು ತೆಗೆದು ಒಳಹೋಗಿ ಕಳ್ಳತನ ಮಾಡಿದ್ದಾನೆ.
ಮನೆಯವರು ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಪೊಲೀಸರು 248.600 ಗ್ರಾಂ ತೂಕದ 11,06,270 ರೂ. ಮೌಲ್ಯದ ಚಿನ್ನಾಭರಣ ಸಹಿತ 4000 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಆರೋಪಿ ವಿಪರೀತ ಸಾಲ ಮಾಡಿಕೊಂಡಿದ್ದು, ಹಣಕಾಸಿನ ತೊಂದರೆಯಲ್ಲಿರುವ ಹಿನ್ನೆಲೆ ಕಳವುಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.