ಕಡಬ: ಆನ್ಲೈನ್ ತರಗತಿಗೆ ಬೇಕಾದ ವ್ಯವಸ್ಥೆಗಳು ಇಲ್ಲದೇ ಕಂಗಾಲಾಗಿದ್ದ ತಾಲೂಕಿನ ಕೋಡಿಂಬಾಳ ಗ್ರಾಮದ ವಿದ್ಯಾರ್ಥಿಗಳ ಮನೆಗೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವುದರ ಜೊತೆ ವರದಿ ಬಿತ್ತರಿಸಿದ 'ಈಟಿವಿ ಭಾರತ'ಗೆ ಅಭಿನಂದನೆ ಸಲ್ಲಿಸಿದ್ದಾರೆ.
ದೊಡ್ಡಕೊಪ್ಪದ ವಿದ್ಯಾರ್ಥಿಗಳಾದ ವರುಣ್ ಮತ್ತು ಲಾವಣ್ಯಾ ಮನೆಯಲ್ಲಿ ಆನ್ಲೈನ್ ಶಿಕ್ಷಣಕ್ಕೆ ಅನುವಾಗುವಂತಹ ಟಿವಿ ಅಥವಾ ಸ್ಮಾರ್ಟ್ ಫೋನ್ ಇರಲಿಲ್ಲ. ಅಲ್ಲದೆ ಬಡತನದಲ್ಲೇ ಜೀವನ ದೂಡುತ್ತಿದ್ದ ಇವರಿಗೆ ಸರಿಯಾದ ಒಂದು ಮನೆಯಾಗಲೀ, ಕನಿಷ್ಠ ಪಕ್ಷ ಒಂದು ಶೌಚಾಲಯ ವ್ಯವಸ್ಥೆಯಾಗಲಿ ಇಲ್ಲ. ಈ ಬಗ್ಗೆ ಎರಡು ದಿನಗಳ ಹಿಂದೆ ಈಟಿವಿ ಭಾರತ ವಿಸ್ತೃತ ವರದಿ ಪ್ರಕಟಿಸಿತ್ತು.
ಇದನ್ನು ಓದಿ-ಕಿತ್ತು ತಿನ್ನುವ ಬಡತನ, ಓದುವ ಹಂಬಲ: ಹಣವಿಲ್ಲದೇ ಗ್ರಾಮೀಣ ಮಕ್ಕಳ ಆನ್ಲೈನ್ ಶಿಕ್ಷಣ ಬಲಿ!
ವರದಿ ಬಿತ್ತರವಾದ ಕ್ಷಣದಿಂದಲೇ ಹಲವಾರು ಜನರು ಇವರ ಸಂಕಷ್ಟಕ್ಕೆ ನೆರವಾಗಲು ಮುಂದೆ ಬಂದಿದ್ದರು. ನೆಲ್ಯಾಡಿ ಸಂತ ಅಲ್ಫೋನ್ಸಾ ಮತ್ತು ಆರ್ಲಸಂತ ಮೇರಿಸ್ ಚರ್ಚ್ ನ ಕಿರಿಯಕುಸುಮ ಮಿಷನ್ ಲೀಗ್ ನ ಮಕ್ಕಳು ಇವರಿಗೆ ಸ್ಮಾರ್ಟ್ ಟಿವಿ, ಡಿಟಿಹೆಚ್ ಸೆಟ್ ನೀಡಿದರೆ ಕಡಬ ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ತಂಡವೊಂದು ಸ್ಮಾರ್ಟ್ ಫೋನ್ ನೀಡಿತ್ತು. ಇನ್ನೂ ಉಪ್ಪಿನಂಗಡಿಯ ಸನ್ ಪವರ್ ಸೋಲಾರ್ ನವರು ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ಎರಡು ಟೇಬಲ್ ಯುಕ್ತ ಕುರ್ಚಿ ಹಾಗೂ ಆರ್ಥಿಕ ನೆರವು ನೀಡಿದರು. ಮಾತ್ರವಲ್ಲದೆ ಹಲವಾರು ಜನರು ಆರ್ಥಿಕ ನೆರವನ್ನು ನೀಡುವ ಬಗ್ಗೆ ತಿಳಿಸಿದ್ದರು.