ಮಂಗಳೂರು: ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಕೇಂದ್ರ ಸರಕಾರದ ವಿರುದ್ದ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಈರುಳ್ಳಿಯ ಮಾಲೆ ಧರಿಸಿ ಹಾಗೂ ಕೃತಕ ಈರುಳ್ಳಿಯನ್ನು ಹಿಡಿದು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶಾಲೆಟ್ ಪಿಂಟೊ ಮಾತನಾಡಿ, ನಮ್ಮ ರಾಜ್ಯದಲ್ಲಿ ಅತೀ ಹೆಚ್ಚು ಈರುಳ್ಳಿ ಬೆಳೆಸುವ ಮತ್ತು ಬಳಸುವವರು ಇದ್ದಾರೆ. ಆದರೆ, ನಮ್ಮಲ್ಲಿ ಈರುಳ್ಳಿ ದರ ಗಗನಕ್ಕೇರಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭ ಮೋದಿಯವರು ದೇಶದಲ್ಲಿ ಅತ್ಯಾಚಾರ, ಈರುಳ್ಳಿ ಬೆಲೆ ಕಡಿಮೆಯಾಗಬೇಕಾದರೆ ಬಿಜೆಪಿಗೆ ಮತಹಾಕಬೇಕು ಎಂದಿದ್ದರು.
ಮೋದಿ ನೀಡಿದ ಸುಳ್ಳಿನ ಭರವಸೆ ನಂಬಿ ಜನರು ಮತ ಹಾಕಿದ್ದಾರೆ. ಆದರೆ ಇಂದು ಅದರ ತದ್ವಿರುದ್ಧವಾದ ಪರಿಸ್ಥಿತಿ ಇದ್ದು, ದೇಶದಲ್ಲಿ ಅತ್ಯಾಚಾರ ದಿನೇ ದಿನೆ ಹೆಚ್ಚುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.