ಮಂಗಳೂರು: ಹೈರಿಸ್ಕ್ ದೇಶದ ಪಟ್ಟಿಯಲ್ಲಿರುವ ಘಾನಾ ದೇಶದಿಂದ ಬಂದಿದ್ದ ವ್ಯಕ್ತಿಗೆ ಒಮಿಕ್ರಾನ್ ವೈರಸ್ ದೃಢಪಟ್ಟಿದ್ದು, ಮಂಗಳೂರಿಲ್ಲಿ ಸೋಂಕಿತರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. ಡಿಸೆಂಬರ್ 16 ರಂದು ಈ ವ್ಯಕ್ತಿ ಘಾನಾ ದೇಶದಿಂದ ಮಂಗಳೂರಿಗೆ ಬಂದಿದ್ದರು. ಆತನನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದಾಗ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು.
ರೋಗಲಕ್ಷಣ ಇಲ್ಲದೆ ಇದ್ದ ಆತನನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಆತನೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ 17 ಮಂದಿಗೆ ಕೊರೊನಾ ತಪಾಸಣೆ ನಡೆಸಲಾಗಿತ್ತು. ಅವರಿಗೆ ನೆಗೆಟಿವ್ ರಿಪೋರ್ಟ್ ಬಂದಿದ್ದು, ಕ್ವಾರಂಟೈನ್ ಮಾಡಲಾಗಿತ್ತು.
ಡಿಸೆಂಬರ್ 16 ರಂದು ಘಾನಾದಿಂದ ಬಂದಿದ್ದ ವ್ಯಕ್ತಿಯ ಮಾದರಿಯನ್ನು ಬೆಂಗಳೂರಿಗೆ ಜಿನೊಮಿಕ್ ಟೆಸ್ಟ್ಗೆ ಡಿಸೆಂಬರ್ 17 ರಂದು ಕಳುಹಿಸಲಾಗಿತ್ತು. ಇಂದು ಅದರ ವರದಿ ಬಂದಿದ್ದು, ಆತನಿಗೆ ಒಮಿಕ್ರಾನ್ ರೂಪಾಂತರಿ ವೈರಸ್ ಇರುವುದು ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದಕ್ಕೂ ಮೊದಲು 6 ಮಂದಿ ವಿದ್ಯಾರ್ಥಿಗಳಿಗೆ ಒಮಿಕ್ರಾನ್ ಇರುವುದು ದೃಢಪಟ್ಟಿದ್ದದ್ದು, ಇದೀಗ ಸೋಂಕಿತರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.
ಇನ್ನು ರಾಜ್ಯದಲ್ಲಿ ಈವರೆಗೆ 31 ಒಮಿಕ್ರಾನ್ ಕೇಸ್ಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ. ದಿನದಿಂದ ದಿನದಕ್ಕೆ ಹೊಸ ರೂಪಾಂತರಿ ಕೇಸ್ಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷ ಆಚರಣೆಗೆ ಸರ್ಕಾರ ನಿರ್ಬಂಧ ವಿಧಿಸಿ ಈಗಾಗಲೇ ಆದೇಶ ಹೊರಡಿಸಿದೆ.
(ಇದನ್ನೂ ಓದಿ: ಬೀಜಿಂಗ್ ಒಲಂಪಿಕ್ಸ್ಗಾಗಿ ಟಫ್ ರೂಲ್ಸ್.. ಚೀನಾದ ಹಲವು ನಗರಗಳಲ್ಲಿ ಕೊರೊನಾ ಕಠಿಣ ನಿಯಮ ಜಾರಿ)