ಮಂಗಳೂರು: ಕೇರಳದಲ್ಲಿ ಮತ್ತೆ ನಿಫಾ ಜ್ವರದ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲೂ ಆರೋಗ್ಯ ಇಲಾಖೆ ವತಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಯಾವುದೇ ರೋಗಿಗಳಲ್ಲಿ ನಿಫಾ ಲಕ್ಷಣಗಳು ಕಂಡು ಬಂದಲ್ಲಿ ಆರೋಗ್ಯ ಇಲಾಖೆಗೆ ತಿಳಿಸಬೇಕು ಎಂದು ಜಿಲ್ಲೆಯ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಕೇರಳದಿಂದ ಮಂಗಳೂರಿಗೆ ಬಂದು ಹೋಗುವವರ ಸಂಖ್ಯೆ ಹೆಚ್ಚಿರುವುದರಿಂದ ಹಾಗೂ ಆಸ್ಪತ್ರೆಗಳಿಗೆ ರೋಗಿಗಳನ್ನು ದಾಖಲಿಸುವ ಹಿನ್ನೆಲೆಯಲ್ಲಿಯೂ ಮುನ್ನೆಚ್ಚರಿಕೆ ವಹಿಸಲಾಗಿದೆ.
ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿಯೇ ಅಧಿಕ ಮಂದಿ ಪ್ರಯಾಣಿಸುತ್ತಾರೆ. ಇದರಲ್ಲಿ ಜ್ವರ ಹಾಗೂ ಇತರ ಅನಾರೋಗ್ಯ ಬಾಧಿತರು ಬಂದಲ್ಲಿ ಸೂಕ್ತ ತಪಾಸಣೆ ನಡೆಸಬೇಕು ಎಂದು ಆರೋಗ್ಯ ಇಲಾಖೆಯಿಂದ ಹೊರಡಿಸಲಾದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಪಕ್ಕದ ರಾಜ್ಯ ಕೇರಳದಲ್ಲಿ ನಿಫಾ ವೈರಸ್ನ ಒಂದು ಪ್ರಕರಣ ಪತ್ತೆಯಾಗಿದೆ. ಎರ್ನಾಕುಲಂನಲ್ಲಿ ಈ ಸೋಂಕು ಬಾಧಿತ ವ್ಯಕ್ತಿ ಪತ್ತೆಯಾಗಿದ್ದು, ಅವರ ಆರೈಕೆಗೆ ಈಗಾಗಲೇ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ನಿಫಾ ವೈರಸ್ ಸೋಂಕು ತಗಲಿರುವ ವ್ಯಕ್ತಿ ಅಥವಾ ಪ್ರಾಣಿಗಳಿಂದ ಇದು ಹರಡುತ್ತದೆ. ಈ ವೈರಸ್ ಸೋಂಕಿನ ಬಗ್ಗೆ ನಮ್ಮ ಜಿಲ್ಲೆಯಲ್ಲೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ. ಅಲ್ಲದೆ ಎಲ್ಲಾ ಆಸ್ಪತ್ರೆಗಳಲ್ಲೂ ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಲು ಆದೇಶಿಸಲಾಗಿದ್ದು, ಎರ್ನಾಕುಲಂನಿಂದ ಬಂದು ಹೋಗುವವರ ಬಗ್ಗೆ ತೀವ್ರ ಎಚ್ಚರಿಕೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಿಫಾ ವೈರಸ್ ಲಕ್ಷಣಗಳು: ನಿಫಾ ವೈರಸ್ ಪ್ರಮುಖವಾಗಿ ಬಾವಲಿ ಹಾಗೂ ಹಂದಿಗಳಿಂದ ಹರಡುತ್ತದೆ. ಇತರ ಸಾಕು ಪ್ರಾಣಿಗಳ ಮೂಲಕವೂ ಹರಡುವ ಸಾಧ್ಯತೆ ಇರುತ್ತದೆ. ರೋಗ ತಗಲಿರುವ ವ್ಯಕ್ತಿಗಳು ಕೆಮ್ಮಿದಾಗ, ಸೀನಿದಾಗ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಅಗತ್ಯ. ಅಲ್ಲದೆ ಬಾವಲಿ ಸೇರಿದಂತೆ ಯಾವುದೇ ಪ್ರಾಣಿಗಳು ಕಚ್ಚಿರುವ ಹಣ್ಣುಗಳನ್ನು ಮನುಷ್ಯರು ತಿಂದಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ಮೆದುಳು ಊತ, ಜ್ವರ, ವಾಂತಿ, ತಲೆನೋವು ಹಾಗೂ ಉಸಿರಾಟದ ತೊಂದರೆ ಇದು ನಿಫಾ ಜ್ವರದ ಪ್ರಮುಖ ಲಕ್ಷಣ. ಅತ್ಯಧಿಕ ವೇಗದಲ್ಲಿ ಹರಡುವ ವೈರಸ್ ಇದಾಗಿದ್ದು, ಸೋಂಕು ತಗಲಿದ 24 ಗಂಟೆಯೊಳಗೆ ರೋಗಿಯು ಕೋಮಾಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.