ಮಂಗಳೂರು: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಾಲೂಕಿನ ಹಲವಾರು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ. ಮಧ್ಯಾಹ್ನ 3ಗಂಟೆಯ ಅವಧಿಯಲ್ಲಿ ನೀರು ಪ್ರವಾಹ ರೂಪದಲ್ಲಿ ಬಂದಿದೆ. ಈ ವೇಳೆ 381 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ 50 ಮಂದಿ ಸಿಲುಕಿಕೊಂಡಿರುವ ಶಂಕೆಯಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿದ್ದ ಎನ್ಡಿಆರ್ಎಫ್ ತಂಡ ಬೆಳ್ತಂಗಡಿಗೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಅಲ್ಲದೆ ಮತ್ತೊಂದು ತಂಡ ಆದಷ್ಟು ಬೇಗ ಜಿಲ್ಲೆಗೆ ಆಗಮಿಸಲಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
![Netravati River at risk](https://etvbharatimages.akamaized.net/etvbharat/prod-images/4093049_t111.jpg)
ಅಣಿಯೂರು ಗ್ರಾಮದ ಕಟಾಜೆಯಲ್ಲಿ ನೀರಿನಲ್ಲಿ ಸಿಲುಕಿಕೊಂಡ ವೃದ್ಧನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಲಾಯಿಲಬೈಲು ಎಂಬಲ್ಲಿ ಗದ್ದೆ, ತೋಟಕ್ಕೆ ನೀರು ನುಗ್ಗಿದ್ದು, ಕಾಲು ಸೇತುವೆಯೊಂದು ಕೊಚ್ಚಿ ಹೋಗಿದೆ. ಅಲ್ಲದೆ ದಲಿತ ಕಾಲನಿಯೊಂದು ನೀರಿನಿಂದ ದಿಗ್ಭಂದನವಾಗಿದೆ. ಮಿತ್ತಬಾಗಿಲು ಡಿಡುಪೆಯ ಕುಕ್ಕಾವು ಸದಾಶಿವೇಶ್ವರ ದೇವಸ್ಥಾನಕ್ಕೆ ಬಂದಿದ್ದ 100ಕ್ಕೂ ಅಧಿಕ ಭಕ್ತರು ದೇವಾಲಯದಲ್ಲಿ ಸಿಲುಕಿಕೊಂಡಿದ್ದಾರೆ. ಮಿತ್ತಬಾಗಿಲು ಕಾಡಬೆಟ್ಟಿನಲ್ಲಿ ಎರಡು ಮನೆ ಮುಳುಗಿದ್ದು, ಮತ್ತೆರಡು ಮನೆಯೊಳಗೆ ಜನರು ಸಿಲುಕಿಕೊಂಡಿದ್ದಾರೆ. ಇವರ ರಕ್ಷಣೆ ಆಗಿಲ್ಲ.ನೆರಿಯದಲ್ಲಿ ಮುಳುಗಿದ್ದ ಮನೆಯಲ್ಲಿ ಐವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ. ಮಿತ್ತಬಾಗಿಲಿನ ಕುಕ್ಕಾವು ಸೇತುವೆ, ಬಾಂಜಾರುಮಲೆಯ ಸೇತುವೆ ಕೊಚ್ಚಿ ಹೋಗಿದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ತಹಶೀಲ್ದಾರ್ ಅವರೂ ರಕ್ಷಣಾ ಕಾರ್ಯದಲ್ಲಿ ನೇತೃತ್ವ ವಹಿಸಿದ್ದರು. ಚಾರ್ಮಾಡಿಯಲ್ಲಿ ಗುಡ್ಡ ಕುಸಿತವಾಗಿದ್ದು, ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 14ರವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.