ಮಂಗಳೂರು: ರಾಷ್ಟ್ರೀಯತೆ ಎಂದರೆ ನಮ್ಮೊಳಗೆ ರಕ್ತಗತವಾಗಿರುವಂತಹ ಭಾವನೆ. ಇದು ಬಾಲ್ಯದಿಂದಲೇ ನಮ್ಮೊಂದಿಗೆ ಇರುತ್ತದೆ. ಯಾರ ಹೇರಿಕೆಯಿಂದ ಬರುವಂತಹದ್ದಲ್ಲ ಎಂದು ಇತ್ತೀಚೆಗೆ ರಾಜೀನಾಮೆ ನೀಡಿದ ದಕ್ಷಿಣಕನ್ನಡ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ನಗರದ ಕಂಕನಾಡಿಯ ಗರಡಿ ಬ್ರಹ್ಮ ಬೈದ್ಯರ್ಕಳ ಕ್ಷೇತ್ರದ ಸಭಾಂಗಣದಲ್ಲಿ ನಡೆದ 'ಗಾಂಧಿ 150 ಚಿಂತನಾಯಾತ್ರೆ' ಕಾರ್ಯಕ್ರಮದಲ್ಲಿ ಭಾಗವಹಿಸಿ 'ಬಾಪು ಮತ್ತು ರಾಷ್ಟ್ರೀಯತೆ' ಕುರಿತ ಉಪನ್ಯಾಸದಲ್ಲಿ ಮಾತನಾಡಿದ ಅವರು, ರಾಷ್ಟ್ರ ಉಳಿಯಬೇಕಾದಲ್ಲಿ ನಾವೆಲ್ಲಾ ಒಂದಾಗಬೇಕು. ಗಾಂಧಿಯವರು ಉಪವಾಸ ಸತ್ಯಾಗ್ರಹವನ್ನೇ ತನ್ನ ಆಯುಧವನ್ನಾಗಿ ಬಳಸಿಕೊಂಡರು. ರಾಷ್ಟೀಯತೆ ಎಂದರೆ ಸಮಾಜದಲ್ಲಿ ವಿವಿಧತೆಯನ್ನು ಕಾಪಾಡುವುದು. ಆದ್ದರಿಂದ ರಾಷ್ಟ್ರೀಯತೆಯನ್ನು ಪ್ರೀತಿಯ ಮೂಲಕ ಗಳಿಸಬೇಕು. ಬಂಧ, ಪ್ರೀತಿ, ಅನುಭೂತಿ, ಉತ್ತಮ ಭಾವನೆಗಳಿಲ್ಲದಿದ್ದಲ್ಲಿ ರಾಷ್ಟ್ರೀಯತೆಯೂ ಇರುವುದಿಲ್ಲ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.
ಕಾರ್ಯಕ್ರಮದ ಮೊದಲಿಗೆ ಕಂಕನಾಡಿಯ ಗರಡಿ ಬ್ರಹ್ಮ ಬೈದ್ಯರ್ಕಳ ಕ್ಷೇತ್ರದ ಗಾಂಧಿ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಗಾಂಧಿಯವರ ಪ್ರಿಯವಾದ ರಘುಪತಿ ರಾಘವ ರಾಜಾರಾಂ, ವೈಷ್ಣವ ಜನತೋ ಗೀತೆಗಳನ್ನು ಹಾಡಲಾಯಿತು. ಈ ವೇಳೆ ಹಿರಿಯ ಸಾಹಿತಿ ಬಿ ಎಂ ಇಚ್ಲಂಗೋಡು, ಚಿಂತಕ ಜಗದೀಶ್ ಕೊಪ್ಪ, ಕಂಕನಾಡಿಯ ಗರಡಿ ಬ್ರಹ್ಮ ಬೈದ್ಯರ್ಕಳ ಕ್ಷೇತ್ರದ ಅಧ್ಯಕ್ಷ ಕೆ ಚಿತ್ತರಂಜನ್ ಉಪಸ್ಥಿತರಿದ್ದರು.