ಮೈಸೂರು : 40 ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಬರುವ ಕಾಯಿಲೆ ಟ್ರೀಚರ್ ಕಾಲಿಮ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದ ಬಾಲಕನಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆ ಆಶಾಕಿರಣವಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ಅಂಗವೈಕಲ್ಯತೆಯನ್ನು ಬಾಲಕನೊಬ್ಬ ದೂರವಾಗಿಸಿಕೊಳ್ಳುತ್ತಿದ್ದಾನೆ.
ತಾಲೂಕಿನ ಪುಟ್ಟೇಗೌಡನ ಹುಂಡಿ(ಚಟ್ನಳ್ಳಿ)ಯ ಗುರುಮೂರ್ತಿ ಹಾಗೂ ಶಂಕರಮಣಿ ಎಂಬ ದಂಪತಿಯ ಮಗ ಕಿರಣ್(8) ಎಂಬಾತ ಹುಟ್ಟುತ್ತಲೇ ಅಂಗವೈಕಲ್ಯತೆ ಹೊಂದಿದ್ದ. ಕೆನ್ನೆ, ಕಣ್ಣು ಮತ್ತು ದವಡೆ ಭಾಗ ಸರಿಯಾಗಿ ಬೆಳವಣಿಗೆಯಾಗದೇ ಕಿರಣ್ ವಿರೂಪವಾಗಿ ಕಾಣಿಸುತ್ತಿದ್ದ.
ಆದರೆ, ಆರೋಗ್ಯ ಇಲಾಖೆಯ ಯೋಜನೆಯಾದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಮೂಲಕ ಶಸ್ತ್ರಚಿಕಿತ್ಸೆಯಿಂದಾಗಿ ಬಾಲಕ ನ್ಯೂನತೆ ಮರೆಯಾಗುತ್ತಿರುವುದರಿಂದ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಈ ದಂಪತಿಗೆ ಹಲವು ವರ್ಷಗಳ ಬಳಿಕ ಗಂಡು ಮಗು ಜನಿಸಿತ್ತು. ಆದರೆ, ಮಗುವಿನ ಮುಖದಲ್ಲಿನ ವೈಕಲ್ಯತೆ ಗಮನಿಸಿ ಆತಂಕಕ್ಕೀಡಾಗಿದ್ದರು. ಇದರೊಂದಿಗೆ ಸಂಬಂಧಿಕರು ಇಲ್ಲಸಲ್ಲದ ಮಾತುಗಳನ್ನಾಡಿದ್ದರು. ಇದರಿಂದ ಎದೆಗುಂದದ ತಂದೆ ಗುರುಮೂರ್ತಿ ಮಗನನ್ನು ಚೆನ್ನಾಗಿ ಆರೈಕೆ ಮಾಡುತ್ತಿದ್ದರು.
ಸಾಕಷ್ಟು ಆಸ್ಪತ್ರೆಗಳನ್ನು ಸುತ್ತಿದ್ದರೂ ಪ್ರಯೋಜನವಾಗಿರಲಿಲ್ಲ. ಶಾಲೆಗೂ ಕಳುಹಿಸುತ್ತಿರಲಿಲ್ಲ. ಈ ನಡುವೆ ಗ್ರಾಮದ ಹುಟ್ಟು ವಿಕಲಚೇತನೆಯಾಗಿದ್ದ ಶಾಲಾ ವಿದ್ಯಾರ್ಥಿನಿಯೊಬ್ಬಳು ಶಸ್ತ್ರಚಿಕಿತ್ಸೆ ಮೂಲಕ ಎಲ್ಲರಂತೆ ಓಡಾಡಲಾರಂಭಿಸಿದ್ದನ್ನು ಗಮನಿಸಿದ ಗುರುಮೂರ್ತಿ ತನ್ನ ಮಗನನ್ನು ಅದೇ ಶಾಲೆಗೆ ಸೇರಿಸಿದರು.
ಈ ವೇಳೆ ಶಾಲೆಯಲ್ಲಿ 'ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ'ದಡಿ ಆರೋಗ್ಯ ತಪಾಸಣೆ ಶಿಬಿರದಲ್ಲಿ ವಿದ್ಯಾರ್ಥಿ ಕಿರಣ್‌ನ ಆರೋಗ್ಯ ಸಮಸ್ಯೆಯನ್ನು ವೈದ್ಯರ ಗಮನಕ್ಕೆ ತಂದ ಶಾಲೆಯ ಮುಖ್ಯ ಶಿಕ್ಷಕಿ ಕುಮುದಾ, ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿ, ಪೋಷಕರನ್ನು ಒಪ್ಪಿಸಿದ್ದರು.
ಇದರಂತೆ ಬೆಂಗಳೂರಿನ ಯಶೋಮತಿ ಆಸ್ಪತ್ರೆಗೆ ಕಿರಣ್‌ನನ್ನು ಚಿಕಿತ್ಸೆಗಾಗಿ ದಾಖಲಿಸಿ, ಶಸ್ತ್ರಚಿಕಿತ್ಸೆ ನಡೆಸಿ, ಡಿಸ್ಚಾರ್ಜ್ ಮಾಡಲಾಗಿದೆ. ಇನ್ನೂ ಒಂದೆರಡು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಮುಖದ ಸ್ವರೂಪ ಬದಲಾಗಲಿದೆ.
ಏನಿದು ಕಾಯಿಲೆ ? : 40 ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ವಿಶೇಷ ರೋಗ ಇದಾಗಿದೆ. ವೈದ್ಯಕೀಯ ಪರಿಭಾಷೆಯಲ್ಲಿ ಟ್ರೀಚರ್ ಕಾಲಿನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಕಣ್ಣು, ಕಿವಿ, ಗಲ್ಲ, ದವಡೆ, ಕೆನ್ನೆ ಈ ಭಾಗಗಳು ಸಹಜವಾಗಿ ಬೆಳೆಯದೇ ಇರುವುದು ಈ ಕಾಯಿಲೆಯ ಲಕ್ಷಣವಾಗಿದೆ. ಇದರ ಪರಿಣಾಮ ಬಾಲಕ ಕಿರಣ್ ಸರಿಯಾಗಿ ಕಿವಿ ಕೇಳದೇ ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾನೆ.
ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ : 2013ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಆರಂಭವಾದ ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆಯನ್ನ ಆರೋಗ್ಯ ಇಲಾಖೆ ನಿರ್ವಹಣೆ ಮಾಡುತ್ತದೆ. 18 ವರ್ಷದೊಳಗಿನ ಸರ್ಕಾರಿ ಶಾಲಾ-ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಆರೋಗ್ಯ ಸೇವೆಯನ್ನು ಈ ಯೋಜನೆ ಒದಗಿಸುತ್ತದೆ.
ಹುಟ್ಟು ಅಂಗವೈಕಲ್ಯ ಹಾಗೂ ನಾನಾ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ಸೇವೆ ನೀಡುತ್ತದೆ. ಶಾಲಾ- ಕಾಲೇಜುಗಳಲ್ಲಿ ಆರೋಗ್ಯ ತಪಾಸಣೆ ನಡೆಸಿ, ಯೋಜನೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಕೊಡಿಸುವುದು ಯೋಜನೆಯ ಉದ್ದೇಶವಾಗಿದೆ.
ಈ ಬಗ್ಗೆ ಕಿರಣ್‌ನ ತಂದೆ ಗುರುಮೂರ್ತಿ ಪ್ರತಿಕ್ರಿಯಿಸಿ, ನನ್ನ ಮಗನ ಮುಖ ಲಕ್ಷಣ ನೋಡಿ, ಆಂಜನೇಯ ಎಂದು ರೇಗಿಸುತ್ತಿದ್ದರು. ಹುಟ್ಟಿನಿಂದಲೂ ಆತನ ಮುಖ ಎಲ್ಲರಂತಿರಲಿಲ್ಲ. ಆದರೆ, ಈಗ ಆತ ಎಲ್ಲರಂತೆ ಆಗುತ್ತಿದ್ದಾನೆ. ಅವನ ಮುಖ ಲಕ್ಷಣವೇ ಬದಲಾಗುತ್ತಿದೆ. ನನ್ನ ಮಗ ಗುಣಮುಖನಾಗುತ್ತಿದ್ದಾನೆ. ಶಾಲಾ ಮುಖ್ಯ ಶಿಕ್ಷಕರು ಮಗನ ಚಿಕಿತ್ಸೆಗೆ ನೆರವಾಗಿದ್ದಾರೆ ಎಂದು ತಿಳಿಸಿದ್ದಾರೆ.