ಸುಬ್ರಹ್ಮಣ್ಯ: ಸಾಮಾನ್ಯವಾಗಿ ಮಕ್ಕಳು ಪ್ರವಾಸ, ಸುತ್ತಾಟ, ದೂರ ಸಂಚಾರಕ್ಕೆ ತಮ್ಮ ಸ್ನೇಹಿತರು, ಒಡನಾಡಿಗಳೊಂದಿಗೆ ತೆರಳಿ ಸಂಭ್ರಮಿಸುವುದನ್ನು ಪ್ರಸ್ತುತ ದಿನದಲ್ಲಿ ನಾವು ಕಾಣುತ್ತೇವೆ. ಆದರೆ, ಮೈಸೂರಿನ ಈ ವ್ಯಕ್ತಿ ತನ್ನ ತಾಯಿಯೊಂದಿಗೆ ದೇಶ ಸುತ್ತುತ್ತಾ, ತೀರ್ಥಯಾತ್ರೆ ಮಾಡುತ್ತಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲಾ ಯಾತ್ರೆಯಲ್ಲಿದ್ದಾರೆ.
ಮೈಸೂರಿನ ಕೃಷ್ಣಕುಮಾರ್ (44) ಹಾಗೂ ಅವರ ತಾಯಿ ಚೂಡರತ್ಮಮ್ಮ (72) ಎಂಬವರು ಜೊತೆಯಾಗಿ ಸ್ಕೂಟರ್‌ನಲ್ಲಿಯೇ ಸುತ್ತಾಟದಲ್ಲಿ ತೊಡಗಿದ್ದಾರೆ. ಸದ್ಯ ಇವರು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸಿದ್ದಾರೆ. ಕೃಷ್ಣ ಕುಮಾರ್ ಅವರು ಉದ್ಯೋಗದಲ್ಲಿದ್ದು, ಕೆಲ ವರ್ಷಗಳ ಹಿಂದೆ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ಅವಿವಾಹಿತರಾಗಿರುವ ಅವರು ತಮ್ಮ ತಾಯಿಯ ಜತೆ ಜೀವನ ಕಳೆಯುತ್ತಿದ್ದು, ತಾಯಿ ಆಸೆ ಪಡುವ ಸ್ಥಳಗಳಿಗೆ ಕರೆದೊಯ್ಯುತ್ತಿದ್ದಾರೆ.
ದೇಶ ಸುತ್ತಾಟ: 2018ರಲ್ಲಿ ಮೈಸೂರಿನಿಂದ ಸುತ್ತಾಟ ಆರಂಭಿಸಿದ ಇಬರು ಬಹುತೇಕ ಭಾರತವನ್ನು ಸುತ್ತಿದ್ದಾರೆ. ಬಳಿಕ ನೇಪಾಳ, ಭೂತನ್, ಮಾಯನ್ಮಾರ್ ದೇಶಗಳಲ್ಲೂ ತಿರುಗಾಟ ನಡೆಸಿ ತಾಯಿಯ ಇಚ್ಚೆಯಂತೆ ನಡೆಸಿಕೊಂಡಿದ್ದಾರೆ. ಕೊರೊನಾ ಬಂದ ಪರಿಣಾಮ 2020ರಲ್ಲಿ ಮೈಸೂರಿಗೆ ಹಿಂದುರಿಗಿದ್ದು, ಬಳಿಕ ಸ್ಥಳೀಯವಾಗಿ ಸುತ್ತಾಟ ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಯಾತ್ರೆ : ಪ್ರಸ್ತುತ ಈ ತಾಯಿ ಮಗ ಇದೀಗ ಮೈಸೂರಿನಿಂದ ಕುಶಾಲನಗರ, ಬಿಸ್ಲೆಘಾಟ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ತಾಯಿಯ ಬೇಡಿಕೆಯಂತೆ ಕುಕ್ಕೆ ದರ್ಶನ ಮಾಡಲಾಗುತ್ತಿದೆ. ಬಳಿಕ ಧರ್ಮಸ್ಥಳ, ಪುತ್ತೂರು ತೆರಳಿ ವಿಟ್ಲದ ಸಂಬಂಧಿಕರ ಮನೆಗೆ ತೆರಳುತ್ತೇವೆ ಎಂದು ಕೃಷ್ಣಕುಮಾರ್ ಮಾಹಿತಿ ನೀಡಿದ್ದಾರೆ.
ಹಳೆಯ ಸ್ಕೂಟರ್ನಲ್ಲೇ ಪಯಣ: ತಾಯಿ ಮಗ ತಮ್ಮ 20 ವರ್ಷಗಳ ಹಿಂದೆ ತಂದೆಯ ಕೊಡಿಸಿದ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿಯೇ ತೀರ್ಥಯಾತ್ರೆ ನಡೆಸುತ್ತಿದ್ದಾರೆ. ಸ್ಕೂಟರ್ ಅನ್ನೇ ತಂದೆ ಎಂದು ಭಾವಿಸಿಕೊಂಡು ನಾವು ಮೂರು ಜನ ಒಟ್ಟಿಗೆ ಪ್ರಯಾಣಿಸುತ್ತಿದ್ದೇವೆ ಎನ್ನುತ್ತಾರೆ ಕೃಷ್ಣಕುಮಾರ್.
ನನ್ನ ತಾಯಿ 60 ವರ್ಷಗಳಿಗೂ ಹೆಚ್ಚು ಕಾಲ ನಾಲ್ಕು ಗೋಡೆಯ ಮಧ್ಯೆಯೇ ಜೀವನ ನಡೆಸುತ್ತಿದ್ದರು. ಹೊರ ಜಗತ್ತು ಕಂಡವರಲ್ಲ. ಇದೀಗ ನಾನು ನನ್ನ ಬ್ರಹ್ಮಚರ್ಯ ಜೀವನದಲ್ಲಿ ತಾಯಿಯ ಸಂಧ್ಯಾಕಾಲದಲ್ಲಿ ಅವರ ಆಸೆಯಂತೆ ತೀರ್ಥ ಕ್ಷೇತ್ರಗಳಿಗೆ ಜತೆಯಾಗಿ ಸಂಚರಿಸುತ್ತಿದ್ದೇನೆ. ಅಧ್ಮಾತ್ಮ ಬದುಕಿನಲ್ಲಿರುವ ನಾನು ಒಂದು ಕ್ಷೇತ್ರ, ಮಠ, ಮಂದಿರಗಳಿಗೆ ಭೇಟಿ ನೀಡಿದರೆ ಅಲ್ಲಿನ ಸಂಪೂರ್ಣ ಪರಿಸರದಲ್ಲಿ ಸುತ್ತಾಡಿಯೇ ಅಲ್ಲಿಂದ ತೆರಳುತ್ತೇನೆ ಎನ್ನುತ್ತಾರೆ ಕೃಷ್ಣಕುಮಾರ್.
ಇದನ್ನೂ ಓದಿ: ತೀರ್ಥಯಾತ್ರೆ ಮುಗಿಸಿ ತಾಯಿಯೊಂದಿಗೆ ತವರಿಗೆ ವಾಪಸ್ ಆದ ಆಧುನಿಕ ಶ್ರವಣಕುಮಾರ...