ಮಂಗಳೂರು: ದೇಶವನ್ನು ಮುನ್ನಡೆಸುವಂತಹ ವ್ಯಕ್ತಿ ಎಲ್ಲಾ ಕ್ಷೇತ್ರದಲ್ಲಿ ಚೌಕಿದಾರನಾಗಿ ಯಾವ ರೀತಿ ಕೆಲಸ ಕಾರ್ಯಗಳನ್ನು ಮಾಡಬಹುದು ಎಂಬುವುದಕ್ಕೆ ಪ್ರಧಾನಿ ಮೋದಿ ಜೀವಂತ ಉದಾಹರಣೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಮೋದಿ ಗುಣಗಾನ ಮಾಡಿದ್ದಾರೆ.
ದ.ಕ ಬಿಜೆಪಿ ಚುನಾವಣಾ ಕಚೇರಿಯಲ್ಲಿ ನಡೆದ ದೇಶದೆಲ್ಲೆಡೆಯ ಜನರೊಂದಿಗೆ ಪ್ರಧಾನಿ ಮೋದಿಯವರ ನೇರ ಸಂವಾದ ಕಾರ್ಯಕ್ರಮ 'ನಾನೂ ಚೌಕಿದಾರ' ಉದ್ದೇಶಿಸಿ ಅವರು ಮಾತನಾಡಿದರು. ಈ ವೇಳೆ ಹತ್ತಾರು ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಂತಹ ಕಾವಲುಗಾರನಾಗಿ, ಚೌಕಿದಾರನಾಗಿ ಮೋದಿಯವರು ಕೆಲಸಗಳನ್ನು ಮಾಡಿದ್ದಾರೆ ಎಂದರು.
ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಸಾಧನೆಗಳನ್ನು ಇರಿಸಿ ಬಿಜೆಪಿ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದೆ. ಆದರೆ ಯಾವುದೇ ದೂರದೃಷ್ಟಿತ್ವವನ್ನು ಇರಿಸಿಕೊಳ್ಳದೆ ಕೇವಲ ಮೋದಿಯವರನ್ನು ವಿರೋಧಿಸಬೇಕೆಂಬ ಒಂದೇ ಒಂದು ಕಾರಣ ಇಟ್ಟುಕೊಂಡು ಇಡೀ ದೇಶದಲ್ಲಿ ಮಹಾಘಟಬಂಧನ್ ಕಾರ್ಯಾಚರಿಸುತ್ತಿದೆ ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಎಲ್ಲಾ ಸ್ತರದ ಸಾಮಾನ್ಯ ಜನರಿಗೆ 117 ಯೋಜನೆಗಳನ್ನು ಕೊಟ್ಟಂತಹ ನರೇಂದ್ರ ಮೋದಿ ಸರಕಾರ ದೇಶದಲ್ಲಿ ಮತ್ತೊಮ್ಮೆ ರಚನೆಯಾಗಬೇಕಾ ಅಥವಾ ಕೇವಲ ವಿರೋಧವನ್ನೇ ಮಾಡುವುದಕ್ಕೋಸ್ಕರ ಬೇರೆ ಬೇರೆ ರೀತಿ ಈ ಯೋಜನೆಗಳನ್ನು ವಿರೋಧಿಸುತ್ತಿದ್ದಂತಹ ಮಹಾಘಟಬಂಧನ್ ದೇಶದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾ ಎಂಬ ವಿಶ್ಲೇಷಣೆ ಈ ಚುನಾವಣೆಯಲ್ಲಿ ನಡೆಯಬೇಕಾಗಿದೆ ಎಂದರು.