ಮಂಗಳೂರು: ನಮ್ಮ ಎಲ್ಲಾ ಶಾಸಕರು ತಮ್ಮ ಎಲ್ಲಾ ಪ್ರವಾಸಗಳನ್ನು ಮೊಟಕುಗೊಳಿಸಿ ಪ್ರವಾಹ ಪೀಡಿತ ತಮ್ಮ ಕ್ಷೇತ್ರಗಳಲ್ಲಿ ಏನು ಅನಾಹುತಗಳಾಗಿದೆಯೋ ಅದಕ್ಕೆ ಪರಿಹಾರವನ್ನು ಕೊಡುವಲ್ಲಿ ಮಾದರಿಯಾಗಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಂಟ್ವಾಳ ತಾಲೂಕಿನಲ್ಲಿ ಪ್ರವಾಹದ ಹಾನಿಯ ಬಗ್ಗೆ ಪರಿಶೀಲನೆ ನಡೆಸಿ, ಬಿ. ಸಿ. ರೋಡ್ನಲ್ಲಿರುವ ಶಾಸಕರ ಕಚೇರಿಯಲ್ಲಿ ಮಾತನಾಡಿದ ಅವರು, ದ.ಕ ಜಿಲ್ಲೆಯಲ್ಲಿ 12 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ನಿನ್ನೆ ಮತ್ತೆ ಕಟೀಲು, ಮಂಗಳೂರು, ಮುಲ್ಕಿಯ ನಂದಿನಿ ಪ್ರದೇಶ ಹಾಗೂ ನದಿ ತೀರದ ಬಳಿ ಒಟ್ಟು ನಾಲ್ಕು ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರವಾಹದ ಪರಿಣಾಮ ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನಲ್ಲಿ ಗರಿಷ್ಠ ಮಟ್ಟದಲ್ಲಿ ಹಾನಿಯಾಗಿದೆ. ಈ ಎಲ್ಲಾ ಕಡೆಗಳಲ್ಲಿ ಸುಮಾರು 543 ಮನೆಗಳು ಕುಸಿದಿವೆ. ಜೊತೆಗೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಳ್ತಂಗಡಿ ತಾಲೂಕಿನ 15 ಗ್ರಾಮಗಳು ಪೂರ್ಣ ಜಲಾವೃತಗೊಂಡಿವೆ. ಇಲ್ಲಿ 350 ಮಂದಿ ಪುನರ್ವಸತಿ ಕೇಂದ್ರದಲ್ಲಿದ್ದಾರೆ. ಬಂಟ್ವಾಳದಲ್ಲಿ 600 ಮಂದಿ ಪುನರ್ವಸತಿ ಕೇಂದ್ರದಲ್ಲಿದ್ದಾರೆ ಎಂದು ಪೂಜಾರಿ ಹೇಳಿದರು. ಸಮಾರೋಪಾದಿಯಲ್ಲಿ ನಮ್ಮ ಇಲಾಖೆಗಳು ಹಾಗೂ ಎನ್ಡಿಆರ್ಎಫ್ ತಂಡ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದೆ. ಅನೇಕ ಕಡೆಗಳಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಿಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಹೀಗಾಗಿ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಕರೆ ಮಾಡಿದ್ದೇನೆ. ಅವರು ಎಲ್ಲಾ ಜಿಲ್ಲೆಗಳ ಆಯಾ ಜಿಲ್ಲಾಧಿಕಾರಿಗಳು ಬಿಎಸ್ಎನ್ಎಲ್ ಟವರ್ಗಳಿಗೆ ಡೀಸೆಲ್ ಪೂರೈಕೆ ಮಾಡಿ, ಯಾವುದೇ ಕಾರಣಕ್ಕೆ ವಿದ್ಯುತ್ ಕಡಿತದಿಂದ ಫೋನ್ ಸಂಪರ್ಕ ಕಡಿತವಾಗಬಾರದೆಂದು ಇಡೀ ರಾಜ್ಯಕ್ಕೆ ಆದೇಶ ನೀಡಿದ್ದಾರೆ ಎಂದು ಹೇಳಿದರು.
ಅಡಿಕೆ, ಭತ್ತ, ತೆಂಗು, ರಬ್ಬರ್ ಮುಂತಾದ ಕೃಷಿ ಬೆಳೆಗಳ ನಾಶದ ಬಗ್ಗೆ ಇನ್ನೂ ಅಂದಾಜು ಮಾಡಬೇಕಾಗಿದೆ. ಅಲ್ಲದೆ ಜಾನುವಾರುಗಳನ್ನು ರಕ್ಷಣೆ ಮಾಡಲು ನಮ್ಮ ಇಲಾಖೆ ಹಾಗೂ ಎನ್ಡಿಆರ್ಎಫ್ ಸಿಬ್ಬಂದಿ ತಂಡೋಪ ತಂಡವಾಗಿ ಕೆಲಸ ಮಾಡುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಈ ವೇಳೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.