ಮಂಗಳೂರು: ಪಿಎಂ ಕೇರ್ಸ್ ನಿಧಿಗೆ ಚೀನಾ ಮೂಲದ ಟಿಕ್ಟಾಕ್ ಸಂಸ್ಥೆ ನೀಡಿರುವ ₹ 30 ಕೋಟಿ ರೂ. ದೇಣಿಗೆಯನ್ನು ಕೇಂದ್ರ ಸರ್ಕಾರ ವಾಪಸ್ ನೀಡಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಒತ್ತಾಯಿಸಿದರು.
ಟಿಕ್ಟಾಕ್ಗೆ ನಿಷೇಧ ಹೇರಿದ್ದರಿಂದ ಕೇವಲ ವ್ಯಾಪಾರಿಯೊಬ್ಬನಿಗೆ ನಷ್ಟ ಅಷ್ಟೇ. ಚೀನಾಗೆ ಯಾವುದೇ ನಷ್ಟವಿಲ್ಲ. ಅದರಿಂದ ಭಾರತಕ್ಕೂ ಲಾಭವಿಲ್ಲ. ಟಿಕ್ಟಾಕ್ ಕಂಪನಿ ಪಿಎಂ ಕೇರ್ಸ್ ನಿಧಿಗೆ ₹ 30 ಕೋಟಿ ನೀಡಿದೆ ಎಂಬ ಮಾಹಿತಿಯಿದೆ. ಆ ಹಣವನ್ನು ಏಕೆ ಮರಳಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಆ್ಯಪ್ ನಿಷೇಧದಿಂದ ಭಾರತೀಯರು ಕೆಲಸ ಕಳೆದುಕೊಂಡಿದ್ದಾರೆ. ಕೇವಲ ಪ್ರಚಾರಕ್ಕಾಗಿ ಬ್ಯಾನ್ ಮಾಡಲಾಗಿದೆ. ಕೇಂದ್ರದ ನಿರ್ಧಾರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಕುಂದಿದೆ. ಚೀನಾದವರು ಭಾರತದ ನಿರ್ಧಾರ ನೋಡಿ ನಗುವ ಪರಿಸ್ಥಿತಿ ಬಂದಿದೆ ಎಂದರು.
ಉತ್ತರಪ್ರದೇಶದಲ್ಲಿ ಪ್ರಿಯಾಂಕ ಗಾಂಧಿ ಅವರಿಗೆ ನೀಡಲಾದ ಸರ್ಕಾರದ ಬಂಗಲೆಯನ್ನು ವಾಪಸ್ ಪಡೆಯಲು ಸೂಚಿಸಲಾಗಿದೆ. ದೆಹಲಿಯಲ್ಲಿ ತುಂಬ ಮಂದಿ ಸರ್ಕಾರಿ ಬಂಗಲೆಯಲ್ಲಿದ್ದಾರೆ. ಅವರ ಹೆಸರನ್ನು ಸರ್ಕಾರ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ಬಳ್ಳಾರಿಯಲ್ಲಿ ಅಮಾನವೀಯವಾಗಿ ಶವ ಸಂಸ್ಕಾರ ಪ್ರಕರಣಲ್ಲಿ ತಪ್ಪು ಮಾಡಿದವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ. ಆರೋಗ್ಯ ಸಚಿವರ ಜಿಲ್ಲೆ ಎಂಬ ಕಾರಣಕ್ಕೆ ಈ ನಡೆಯೇ ಎಂದು ಪ್ರಶ್ನಿಸಿದರು.
ದ.ಕ.ಜಿಲ್ಲೆಯಲ್ಲಿ ವಿಧಿ ವಿಧಾನ ಪ್ರಕಾರ ಅಂತ್ಯ ಸಂಸ್ಕಾರ ನಡೆಯುತ್ತಿದೆ. ಕೊರೊನಾಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗಲಿದೆ. ಆದರೆ, ಜಿಲ್ಲೆಯಲ್ಲಿ ಒಂದು ಆ್ಯಂಬುಲೆನ್ಸ್ ಮಾತ್ರವಿದೆ. ಎಲ್ಲಾ ಧರ್ಮದವರಿಗೂ ಪ್ರತ್ಯೇಕ ಸ್ಮಶಾನದ ವ್ಯವಸ್ಥೆ ಕಲ್ಪಿಸಿ ಎಂದರು.