ಮಂಗಳೂರು: ಲಾಕ್ಡೌನ್ ಕೊರೊನಾಕ್ಕೆ ಔಷಧಿಯಲ್ಲ, ಅದು ಪೂರ್ವ ತಯಾರಿಗೆ ಮಾತ್ರ ಇರುವ ಸಮಯವಷ್ಟೇ. ಆದರೆ, ಸರ್ಕಾರದಿಂದ ಯಾವುದೇ ಪೂರ್ವ ತಯಾರಿಯಾಗುತ್ತಿಲ್ಲ. ಆದ್ದರಿಂದ ಮುಂದಿನ ಒಂದು ತಿಂಗಳಲ್ಲಿ ರಾಜ್ಯದ ಸ್ಥಿತಿ ಚಿಂತಾಜನಕವಾಗಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಲೇ ಎಚ್ಚೆತ್ತು ಪೂರ್ವ ತಯಾರಿಗೆ ಅದ್ಯತೆ ನೀಡಿ, ಮನೆಮನೆಗೆ ತೆರಳಿ ಎಲ್ಲರಿಗೂ ಲಸಿಕೆ ನೀಡುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಆದೇಶಿಸಿರುವ ಲಾಕ್ಡೌನ್ನಿಂದ ಜನರಿಗೆ ಗೊಂದಲವಿದ್ದು, ಸ್ಪಷ್ಟತೆಯಿಲ್ಲ. ಇದರಿಂದ ಲಾಕ್ಡೌನ್ ನಿಯಮಗಳ ಪಾಲನೆಯೂ ಸಾಧ್ಯವಾಗುವುದಿಲ್ಲ. ಸರ್ಕಾರ ಯಾವುದೇ ಪೂರ್ವ ಯೋಜನೆಯಿಲ್ಲದೆ ಬಂದ್ ಮಾಡಿದೆ. ರಾಜ್ಯದಲ್ಲಿ ಯಾವುದೇ ರೀತಿಯಲ್ಲಿ ವೆಂಟಿಲೇಟರ್, ಆಕ್ಸಿಜನ್, ಬೆಡ್‌ಗಳ ವ್ಯವಸ್ಥೆಯಲ್ಲಿ ಹೆಚ್ಚಳವಾಗಿಲ್ಲ. ಸೋಂಕನ್ನು ಉಲ್ಬಣವಾಗದಂತೆ ಸರ್ಕಾರ ಕೈಗೊಳ್ಳುವ ಯೋಜನೆಗಳ ಬಗ್ಗೆಯೂ ಜನರಿಗೆ ಮೊದಲಾಗಿ ತಿಳಿಸಲಿ. ಅಲ್ಲದೇ ಬಂದ್ ಮಾಡಿದರೂ ಚಿಂತೆಯಿಲ್ಲ ಮನೆಮನೆಗೆ ತೆರಳಿ ಜನರಿಗೆ ಲಸಿಕೆ ನೀಡುವ ಕಾರ್ಯ ಸರ್ಕಾರದಿಂದ ಚಾಲನೆಯಗಲಿ. ಇದರಿಂದ ಮಾತ್ರ ಸೋಂಕು ನಿಯಂತ್ರಣಕ್ಕೆ ಬರಲು ಸಾಧ್ಯ ಎಂದು ಹೇಳಿದರು.
ಕೋವಿಡ್ ಲಸಿಕೆ ತಯಾರಿಕೆಗೆ ಕೇಂದ್ರ ಸರ್ಕಾರ ಯಾವುದೇ ಹಣ ನೀಡಿಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಲಿ. ಕೇಂದ್ರದ ಮಾನಸಿಕ ಒತ್ತಡದಿಂದಲೇ ಲಸಿಕೆ ತಯಾರಿಕಾ ಸಂಸ್ಥೆಯವ ದೇಶ ಬಿಟ್ಟು ಓಡಿಹೋದ. ಆದ್ದರಿಂದ ಲಸಿಕೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸಂಪೂರ್ಣ ವಿಫಲವಾಗಿದೆ. ಲಾಕ್ ಡೌನ್ ಮಾಡಿರೋದರಿಂದ ಸೋಂಕಿತರ ಸಂಖ್ಯೆಯಲ್ಲಿ ಯಾವುದೇ ರೀತಿಯ ಇಳಿಕೆ ಕಂಡು ಬರುತ್ತಿಲ್ಲ ಎಂದು ಖಾದರ್ ಹೇಳಿದರು.
ಸರ್ಕಾರ ಲಾಕ್ ಡೌನ್ ಮಾತ್ರವಲ್ಲ, ಎಲ್ಲರಿಗೂ ಆಹಾರದ ಕಿಟ್ ಒದಗಿಸಬೇಕು. ಕೇರಳ ಸರ್ಕಾರಕ್ಕೆ ಎರಡು ವರ್ಷಗಳಿಂದ ಆಹಾರದ ಕಿಟ್ ಕೊಡಲು ಸಾಧ್ಯವಿದೆ ಎಂದಾದಲ್ಲಿ ಕರ್ನಾಟಕ ಸರ್ಕಾರಕ್ಕೆ ಯಾಕೆ ಸಾಧ್ಯವಿಲ್ಲ. ರಾಜ್ಯ ಸರ್ಕಾರಕ್ಕೆ ಆಕ್ಸಿಜನ್ ವ್ಯವಸ್ಥೆ ಮಾಡಬೇಕೆಂದು ಕೋರ್ಟ್ ಆದೇಶಿಸಬೇಕೆ. ಇದೇ ಹೈಕೋರ್ಟ್ನ ಆದೇಶವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುತ್ತಾರೆ. ಸುಪ್ರೀಂಕೋರ್ಟ್ ಅದನ್ನು ಕೈಬಿಟ್ಟಿದೆ. ಆದರೆ ಈ ಬಗ್ಗೆ ಸಿಎಂ ಆಗಲಿ, ರಾಜ್ಯದ ಸಂಸದರಾಗಲಿ ಒಬ್ಬರು ಕೇಂದ್ರದಲ್ಲಿ ಪ್ರಶ್ನಿಸಿಲ್ಲ ಎಂದು ಯು.ಟಿ.ಖಾದರ್ ಹೇಳಿದರು.
ದ.ಕ.ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿದ್ದು, ಕೇರಳದಿಂದ ಬರುವ ಆಕ್ಸಿಜನ್ ಅನ್ನು ಅಲ್ಲಿನ ಸರ್ಕಾರ ತಡೆಹಿಡಿದಿದೆ. ಇದಕ್ಕೆ ಕೇಂದ್ರಕ್ಕೆ ಒತ್ತಡಹಾಕಿ ಹೆಚ್ಚುವರಿ ಆಕ್ಸಿಜನ್ ತರಿಸಬೇಕಾಗಿದೆ. ತಮಿಳುನಾಡು ಸಿಎಂ ಕೇಂದ್ರಕ್ಕೆ ಒತ್ತಡ ಹಾಕಿ ಹೆಚ್ಚುವರಿ ಆಕ್ಸಿಜನ್ ತರಿಸಿಕೊಳ್ಳುವುದಾಗಲಿ, ದ.ಕ.ಜಿಲ್ಲೆಯ ಸಂಸದರು ಯಾಕೆ ಒತ್ತಡ ಹಾಕುತ್ತಿಲ್ಲ. ಜಿಲ್ಲೆಯ ಕೋವಿಡ್ ಆಸ್ಪತ್ರೆಯ ನರ್ಸ್ಗಳಿಗೆ, 108 ಆ್ಯಂಬುಲೆನ್ಸ್ ನ ಡ್ರೈವರ್ ಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಮೂರು ತಿಂಗಳಿನಿಂದ ವೇತನ ದೊರಕಿಲ್ಲ. ಇದರಿಂದ ಅವರು ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಆದ್ದರಿಂದ ತಕ್ಷಣ ಅವರಿಗೆ ಸಂಬಳದ ವ್ಯವಸ್ಥೆ ಮಾಡಲಿ ಎಂದು ಹೇಳಿದರು.