ಸುಳ್ಯ(ದಕ್ಷಿಣಕನ್ನಡ): ಸೇತುವೆಗೆ ಡಿಕ್ಕಿ ಹೊಡೆದು ಕಾರು ಹೊಳೆಗೆ ಉರುಳಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮೂರನೇ ದಿನವೂ ಮುಂದುವರೆದಿತ್ತು. ನಾಪತ್ತೆಯಾದವರಲ್ಲಿ ಇಂದು ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಕಾರು ಬಿದ್ದ ಜಾಗದಿಂದ ಕೆಳಗಡೆ ಸುಮಾರು 250ಮೀ ದೂರದಲ್ಲಿ ಒಂದು ಮೃತದೇಹವನ್ನು ಸ್ಥಳೀಯರು ಮೊದಲು ನೋಡಿದ್ದು, ನಂತರದಲ್ಲಿ ಇನ್ನೊಂದು ಮೃತದೇಹ ಪತ್ತೆಯಾಗಿದೆ.
ಮೃತದೇಹ ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಬೈತಡ್ಕ ಸೇತುವೆಯಿಂದ 250 ಮೀಟರ್ ದೂರದ ಮರಕ್ಕಡ ಜೇಡರಕೇರಿ ಮಂಜಯ್ಯ ಆಚಾರ್ಯ ಎಂಬವರ ಮನೆಯ ಬಳಿಯ ಹೊಳೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಜುಲೈ 10 ರಂದು ಮಧ್ಯರಾತ್ರಿ 12.30 ರ ಸುಮಾರಿಗೆ ಬೈತಡ್ಕ ಮಸೀದಿ ಬಳಿ ಮಾರುತಿ 800 ಕಾರು ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು, ಕಾರು ಚಾಲಕ ಧನುಷ್ (26), ಸಹ ಪ್ರಯಾಣಿಕ ಧನುಷ್ (21) ಕಾಣೆಯಾಗಿದ್ದರು. ಇವರು ಸಂಚರಿಸಿದ ಕಾರನ್ನು ಅಂದೇ ನದಿಯಿಂದ ಮೇಲೆಕ್ಕೆತ್ತಲಾಗಿತ್ತು.
ಓದಿ: ಸುಳ್ಯ ಬಳಿ ಹಳ್ಳಕ್ಕೆ ಬಿದ್ದ ಕಾರು ಪತ್ತೆ.. ಇಬ್ಬರು ನಾಪತ್ತೆ, ಮುಂದುವರೆದ ಶೋಧ ಕಾರ್ಯಾಚರಣೆ
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಘಟನೆಯನ್ನು ದೃಢಪಡಿಸಲಾಗಿದ್ದು, ಅದರಂತೆ ಸ್ಥಳೀಯ ಪೊಲೀಸರು, ಸ್ಥಳೀಯ ಸಾರ್ವಜನಿಕರು, ಅಗ್ನಿಶಾಮಕ ದಳ ಹಾಗೂ ಸವಣೂರಿನ ನಾಲ್ವರು ಡೈವರ್‌ಗಳಿಂದ ಮೊದಲು ಶೋಧ ಕಾರ್ಯ ನಡೆದರೂ ನಾಪತ್ತೆಯಾದವರು ಪತ್ತೆ ಆಗಿರಲಿಲ್ಲ. ನಿನ್ನೆ ಮತ್ತೆ ಬೆಳಗ್ಗೆಯಿಂದ ಎಸ್.ಡಿ.ಆರ್.ಎಫ್ ತಂಡ ಬೆಳ್ಳಾರೆ, ಕಡಬ ಪೊಲೀಸರು, ಕಂದಾಯ ಅಧಿಕಾರಿಗಳು ನಾಪತ್ತೆಯಾದವರ ಹುಡುಕಾಟ ಆರಂಭಿಸಿದ್ದರು. ನಿನ್ನೆ ಕೂಡ ಕಾರು ಬಿದ್ದ ಜಾಗದಿಂದ ಸುಮಾರು ಮೂರುವರೆ ಕಿ.ಮೀ. ಕೆಳಗಿನ ಕಪ್ಪೆಜಾಲು ಸೇತುವೆಯ ಬಳಿ ಶೋಧ ಕಾರ್ಯ ನಡೆಸಲಾಗಿತ್ತು.