ಮಂಗಳೂರು: ಬಂದರು ಸಮಸ್ಯೆ ನಿವಾರಣೆಗೆ ಶಾಶ್ವತವಾಗಿ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯ ಅಧಿಕಾರಿಗಳು ಮತ್ತು ಮೀನುಗಾರಿಕಾ ಸಂಘಟನೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ, ವ್ಯವಸ್ಥಿತ ಬಂದರು ನಿರ್ಮಾಣದ ಬಗ್ಗೆ ಗಮನ ಹರಿಸುತ್ತೇನೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಮಂಗಳೂರು ಬಂದರಿನಲ್ಲಿರುವ ಮತ್ಸ್ಯಗಂಧಿ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ಎಫ್ಎಫ್ಪಿಒ (ಫಿಶ್ ಫಾರ್ಮರ್ಸ್ ಪ್ರೊಡ್ಯೂಸರ್ ಆರ್ಗನೈಸೇಷನ್) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂದರಿನ ಸಣ್ಣ - ಸಣ್ಣ ಸಮಸ್ಯೆಗಳನ್ನು ಶಾಶ್ವತವಾಗಿ ನಿವಾರಿಸಲು ತುರ್ತಾಗಿ ಗಮನ ಹರಿಸಲಾಗುತ್ತದೆ.
ಮಂಗಳೂರು ಬಂದರಿನಲ್ಲಿ 1,200 ಯಾಂತ್ರಿಕ ಹಾಗೂ 1,300 ನಾಡ ದೋಣಿಗಳು ಸೇರಿ ಒಟ್ಟು 2,500 ದೋಣಿಗಳಿವೆ. ಆದರೆ, ಇದೀಗ ಬಂದರಿನಲ್ಲಿ 1,500 - 2,000 ದೋಣಿಗಳಿಗೆ ಮಾತ್ರ ನಿಲುಗಡೆಗೆ ವ್ಯವಸ್ಥೆಗಳಿದ್ದು, ಉಳಿದ ದೋಣಿಗಳಿಗೆ ಲಂಗರು ಹಾಕಲು ಸರಿಯಾದ ವ್ಯವಸ್ಥೆಗಳಿಲ್ಲ. ಯಾವುದೇ ಸರ್ಕಾರಗಳಿರಲಿ, ಒಂದು ಯೋಜನೆಗೆ ಸೂಕ್ತ ರೀತಿಯ ಪರಿಹಾರ ನೀಡುವುದಿಲ್ಲ. ಆದರೆ, ನಮ್ಮಲ್ಲಿ ಭವಿಷ್ಯದ ದೂರದೃಷ್ಟಿತ್ವ ಇದ್ದಲ್ಲಿ ಸರ್ಕಾರದಿಂದ ದೊರಕುವ ಅನುದಾನ ಹಾಗೂ ಒಂದು ಯೋಜನೆಗೆ ಬೇಕಾಗಬಹುದಾದ ಪರಿಸ್ಥಿತಿ ಕೂಡಾ ಸುಧಾರಿಸಲು ಸಾಧ್ಯ.
ಜನರಿಗೆ ನನ್ನ ಬಗ್ಗೆ ಸಂಶಯ ಬೇಡ. ನಾನು ಯಾವತ್ತೂ ನನ್ನ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿಲ್ಲ. ತಮ್ಮ ಯಾವುದೇ ಬೇಡಿಕೆಗಳಿದ್ದರೂ ನನ್ನಲ್ಲಿ ಬಂದು ಸಲ್ಲಿಸಿ, ಈಡೇರಿಸುವ ಪ್ರಯತ್ನ ಮಾಡುತ್ತೇನೆ. ನನಗೆ ಪಕ್ಷ ನೀಡಿರುವ ಖಾತೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ, ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯ, ಮೀನುಗಾರಿಕೆ ಸಲಕರಣೆಗಳ ಕಿಟ್ ಸವಲತ್ತುಗಳ ವಿತರಣೆ, ಎಫ್ಆರ್ ಪಿ ದೋಣಿ, ಬಲೆ ಮತ್ತು ಇಂಜಿನ್ ವಿತರಣೆ, ಮೀನುಗಾರಿಕೆ ಸುರಕ್ಷತಾ ಸಾಧನಗಳ ಖರೀದಿಗೆ ಸಹಾಯಧನ, ಸೀಗಡಿಕೊಳ ನಿರ್ಮಾಣಕ್ಕೆ ಸಹಾಯಧನ ಸೇರಿದಂತೆ ಮತ್ತಿತರ ಫಲಾನುಭವಿಗಳಿಗೆ ಸಚಿವರು ಸೌಲಭ್ಯ ವಿತರಣೆ ಮಾಡಿದರು.
ಓದಿ: ನೆಚ್ಚಿನ ನಟನಿಗೆ ಮುತ್ತಿಗೆ ಹಾಕಿದ್ದಕ್ಕೆ ಅಸಮಾಧಾನ; ಫಿಲ್ಮ್ ಚೇಂಬರ್ ಬಳಿ ಆಗಮಿಸಿದ ನಟ ಜಗ್ಗೇಶ್ ಅಭಿಮಾನಿಗಳು
ಕಾರ್ಯಕ್ರಮಕ್ಕೂ ಮೊದಲು ಬಂದರಿಗೆ ಭೇಟಿ ನೀಡಿದ ಎಸ್.ಅಂಗಾರ, ಅಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲನೆ ನಡೆಸಿದರು.