ಪುತ್ತೂರು: ಸಾಮಾನ್ಯವಾಗಿ ಹೋಟೆಲ್, ಕ್ಯಾಂಟೀನ್ಗಳಲ್ಲಿ ಎಲ್ಲೋ ಬೆಳೆದ ಚಹಾ ಮತ್ತು ಕಾಫಿ ಪುಡಿ ಬಳಸಿ ಗ್ರಾಹಕನಿಗೆ ಕಾಫಿ, ಟೀ ಮಾಡಿ ಕೊಡಲಾಗುತ್ತದೆ. ಆದರೆ, ಈ ಕ್ಯಾಂಟೀನ್ ತುಂಬಾನೇ ವಿಭಿನ್ನ. ಈ ಕ್ಯಾಂಟೀನ್ ಕಮ್ ನರ್ಸರಿಯಲ್ಲಿ ಕೊಡುವ ಒಂದೊಂದು ಪಾನೀಯಕ್ಕೂ ಔಷಧೀಯ ಗುಣವಿದೆ. ಬ್ಯಾಂಬೂ ಟೀ, ಮಸಾಲ ಟೀ, ಗಾಂಧಾರಿ ಲೈಮ್ ಸೋಡಾ, ಏಲಕ್ಕಿ ಟೀ, ಲೆಮೆನ್ ಗ್ರಾಸ್ ಟೀ, ವೀಳ್ಯ, ಕಾಮಕಸ್ತೂರಿ, ತುಳಸಿ ಹೀಗೆ ಪರಿಸರದಲ್ಲಿ ದೊರಕುವ ಎಲ್ಲ ಗಿಡಗಳ ಟೀ ಈ ಕ್ಯಾಂಟೀನ್ ನಲ್ಲಿ ದೊರೆಯುತ್ತೆ.
ಈ ಕ್ಯಾಂಟೀನ್ನಲ್ಲಿ ಐಷಾರಾಮಿ ಆಸನ ವ್ಯವಸ್ಥೆಯಿಲ್ಲ, ಅತ್ಯಾಧುನಿಕ ಛಾವಣಿ ವ್ಯವಸ್ಥೆಯಿಲ್ಲ. ಆದರೆ, ಇಲ್ಲಿಗೆ ಬಂದ ಗ್ರಾಹಕ ಮತ್ತೊಮ್ಮೆ ಇತ್ತ ಮುಖ ಮಾಡದೇ ಇರಲಿಕ್ಕಿಲ್ಲ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಹೊರವಲಯದ ಮಂಗಳೂರು - ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಪರ್ಪುಂಜದಲ್ಲಿರುವ ಈ ಸೌಗಂಧಿಕಾ ಕ್ಯಾಂಟೀನ್ ಇದೆ. ಈ ಭಾಗದಲ್ಲಿ ಇದು ತುಂಬಾನೆ ಫೇಮಸ್.
ಇದನ್ನೂ ಓದಿ: ಭೋವಿ ಅಭಿವೃದ್ಧಿ ನಿಗಮದಲ್ಲಿ ಲೂಟಿಗೆ ಯತ್ನ ಆರೋಪ: ನಿಗಮ ಮಂಡಳಿ ನಿರ್ದೇಶಕನ ಬಂಧನಕ್ಕೆ ಪೊಲೀಸರ ಶೋಧ
ಈ ಕ್ಯಾಂಟೀನ್ನಲ್ಲಿ ವಿವಿಧ ಹೂ, ಔಷಧೀಯ ಗುಣಗಳಿರುವ ಗಿಡಗಳಿದ್ದು, ಇವುಗಳನ್ನೇ ಬಳಸಿಕೊಂಡು ಟೀ ಹಾಗೂ ಪಾನೀಯಗಳನ್ನು ತಯಾರಿಸಲಾಗುತ್ತದೆ. ಕಳೆದ ಹತ್ತು ವರ್ಷಗಳಿಂದ ಹೆದ್ದಾರಿ ಪಕ್ಕದಲ್ಲೇ ಇರುವ ಮನೆಯ ಸುತ್ತ ನರ್ಸರಿ ಮತ್ತು ಪುಟ್ಟ ಕ್ಯಾಂಟೀನ್ ನಡೆಸಿಕೊಂಡು ಬರುತ್ತಿರುವ ಚಂದ್ರ ಮತ್ತು ಪ್ರೀತಿ ದಂಪತಿ ನರ್ಸರಿಯಲ್ಲಿ ಬೆಳೆಯುವ ವಿವಿಧ ಜಾತಿಯ ಔಷಧೀಯ ಗುಣಗಳಿರುವ ಏಲಕ್ಕಿ, ಮಸಾಲ ಎಲೆಗಳು, ಬಿದಿರಿನ ಚಿಗುರು, ವೀಳ್ಯ, ಕರಿಮೆಣಸು, ಗಾಂಧಾರಿ, ಕಾಮಕಸ್ತೂರಿ, ಲೆಮೆನ್ ಗ್ರಾಸ್ ಹೀಗೆ ವಿವಿಧ ಜಾತಿಯ ಎಲೆಗಳನ್ನು ಬಳಸಿಕೊಂಡು ತಮ್ಮದೇ ರೀತಿಯ ಪಾನೀಯ ಮಾಡಿಕೊಡುತ್ತಾರೆ. ಇದಕ್ಕೆ ಗ್ರಾಹಕರು ಮನಸೋತಿದ್ದಾರೆ.