ಮಂಗಳೂರು: ಪರಿಸರ ಉಳಿಸಿ ಅಂತಾ ಪುಕ್ಕಟ್ಟೆ ಸಂದೇಶ ಕೊಡುವವರು ಸಮಾಜದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆದರೆ ಮಂಗಳೂರಿನಲ್ಲಿ ಸದ್ದಿಲ್ಲದೇ ಅರಣ್ಯ ನಿರ್ಮಾಣ ಮಾಡುತ್ತಾ ಪರಿಸರ ಜಾಗೃತಿ ಸಂದೇಶ ಸಾರುತ್ತಿದ್ದಾರೆ ಮಂಗಳೂರಿನ ಜೀತ್ ಮಿಲನ್. ನಗರದ ಸ್ಮಶಾನಗಳಲ್ಲಿ, ತ್ಯಾಜ್ಯ ಹಾಕಿರುವ ಪ್ರದೇಶಗಳನ್ನು ಗುರುತಿಸಿ ಸದ್ದಿಲ್ಲದೇ ಅರಣ್ಯ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಅರ್ಬನ್ ಫಾರೆಸ್ಟ್ ನಿರ್ಮಾಣ ಮಾಡುವ ಬಗ್ಗೆ ಸದಾ ತುಡಿತದಲ್ಲಿರುವ ಜೀತ್ ಮಿಲನ್ ಈವರೆಗೆ ಸುಮಾರು ಒಂದೂವರೆ ಲಕ್ಷ ಗಿಡಗಳನ್ನು ನೆಟ್ಟು ಪರಿಸರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ.
ಮಿಯಾವಾಕಿ ಅರಣ್ಯ ಪದ್ಧತಿ: ಈ ಕಲ್ಪನೆಯಲ್ಲಿ ಜೀತ್ ಮಿಲನ್ ಕೆಲಸ ಮಾಡುತ್ತಿದ್ದಾರೆ. ಇವರು ನಗರದಲ್ಲಿ ಈಗಾಗಲೇ ಹಲವೆಡೆ ಮಿಯಾವಾಕಿ ಕಾಡು ಸೃಷ್ಟಿಸಿದ್ದಾರೆ. ಒಂದು ದೊಡ್ಡ ಮರವಾಗುವ ಗಿಡಗಳ ಪಕ್ಕದಲ್ಲಿ ಸಣ್ಣ ಗಿಡಗಳನ್ನು ನೆಡುವ ಅರಣ್ಯದ ಮಾದರಿಯನ್ನು ಮಿಯಾವಾಕಿ ಅರಣ್ಯ ಮಾದರಿ ಎನ್ನುತ್ತಾರೆ. ಈ ಕಲ್ಪನೆಯನ್ನು ಮಂಗಳೂರಿನಲ್ಲಿ ಯಶಸ್ವಿಯಾಗಿ ಜೀತ್ ಮಿಲನ್ ಮಾಡುತ್ತಿದ್ದಾರೆ.
ಜೀತ್ ಮಿಲನ್ ಅವರು ನಗರದ ಹಲವೆಡೆ ಮಿಯಾವಕಿ ಕಾಡುಗಳನ್ನು ರೂಪಿಸಿದ್ದಾರೆ. ಸದ್ಯ ಮಂಗಳೂರಿನ ಪದುವ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ 74 ಸೆಂಟ್ಸ್ ಜಾಗದಲ್ಲಿ ಅರಣ್ಯವನ್ನು ನಿರ್ಮಿಸುತ್ತಿದ್ದಾರೆ. ತ್ಯಾಜ್ಯದ ಕೊಂಪೆಯಾಗಿದ್ದ ಈ ಸ್ಥಳದಲ್ಲಿ ತ್ಯಾಜ್ಯ ತೆಗೆದು ಕಾಡನ್ನು ನಿರ್ಮಾಣ ಮಾಡಿದ್ದಾರೆ. ಇಷ್ಟು ಸಣ್ಣ ಜಾಗದಲ್ಲಿ 2 ಸಾವಿರಕ್ಕೂ ಅಧಿಕ ವಿವಿಧ ಬಗೆಯ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಇವುಗಳಿಗೆ ಫ್ಲ್ಯಾಟ್ಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸದಿಂದ ಮಾಡಿದ ಗೊಬ್ಬರ ಬಳಸುತ್ತಿದ್ದಾರೆ.
ಇದನ್ನೂ ಓದಿ: ಸ್ಮಶಾನದೊಳಗೊಂದು ವನವ ಮಾಡಿದ 'ಜೀತ್ ಮಿಲನ್ ರೋಚ್'...!
ಏನಿದು ಮಿಯಾವಾಕಿ ಅರಣ್ಯ ಪದ್ಧತಿ?: ಪರಮಾಣು ಬಾಂಬ್ ದಾಳಿ ಪರಿಣಾಮ ಜಪಾನ್ನ ಜೀವ ಸಂಕುಲವೇ ಸರ್ವನಾಶವಾಗಿತ್ತು. ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಅಮೆರಿಕ ಹಾಕಿದ ಬಾಂಬ್ನ ತೀವ್ರತೆಯಿಂದ ಜನ ಬದುಕುವುದು ಕಷ್ಟ ಸಾಧ್ಯವಾಗಿತ್ತು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಇಡೀ ದೇಶಕ್ಕೆ ಆಸರೆಯಾದವನು ಚಿಂತಕ, ಪರಿಸರ ಪ್ರೇಮಿ 'ಅಕಿರಾ ಮಿಯಾವಾಕಿ'. ಜೀವ ಸಂಕುಲ ಮರು ಸೃಷ್ಟಿ ಹೇಗೆ ಮಾಡಬಹುದು ಎಂಬುದನ್ನರಿತ ಇವರು ಇಡೀ ಜಗತ್ತಿಗೆ ಪ್ರಾಯೋಗಿಕವಾಗಿ ಮಾಡಿ ತೋರಿಸಿದ ನಗರ ಅರಣ್ಯೀಕರಣ ಪದ್ಧತಿಯೇ ಮಿಯಾವಾಕಿ ಅರಣ್ಯ ಪದ್ಧತಿ.
ಕಡಿಮೆ ಜಾಗದಲ್ಲಿ ಗಿಡಗಳನ್ನು ಒತ್ತು ಒತ್ತಾಗಿ ಬೆಳೆಸಿ ದಟ್ಟ ಅರಣ್ಯ ಮಾಡುವ ವಿಧಾನವನ್ನು ಜಪಾನಿನ ಮಿಯಾವಾಕಿ ಅರಣ್ಯ ಮಾದರಿ ಎನ್ನುತ್ತಾರೆ. ಐದು ವರ್ಷಗಳಲ್ಲಿ ಬೆಳೆಯುವ ಮರಗಳು ಕೇವಲ ಎರಡೇ ವರ್ಷದಲ್ಲಿ ಅದ್ಭುತವಾಗಿ ಬೆಳೆಸುವ ಮಾದರಿ ಇದಾಗಿದೆ. ಸಾಲು ಸಾಲುಗಳಲ್ಲಿ ಸಸಿಗಳ ನಡುವೆ ಸ್ವಲ್ಪ ಅಂತರ ಬಿಟ್ಟು ನೆಟ್ಟು ತಿಂಗಳಿಗೊಮ್ಮೆ ನೀರು ಕೊಟ್ಟು ಸುಮಾರು ಇನ್ನೂರು ಜಾತಿಯ ವಿವಿಧ ಮರಗಳನ್ನು ಬೆಳೆಯಬಹುದಾಗಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ 'ಮಿಯಾವಾಕಿ ಅರಣ್ಯ ಪದ್ಧತಿ' ಅನುಷ್ಠಾನ: 15 ಕಡೆ ಅರಣ್ಯೀಕರಣ ಮಾಡಲು ಮುಂದಾದ ಪಾಲಿಕೆ