ಮಂಗಳೂರು(ದಕ್ಷಿಣಕನ್ನಡ): ಮಂಗಳೂರು ವಿವಿಯ ವೆಬ್ ಪೋರ್ಟಲ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ 1, 3 ಹಾಗೂ 5ನೇ ಸೆಮಿಸ್ಟರ್ ಫಲಿತಾಂಶ ಸಿಗದೆ ವಿದ್ಯಾರ್ಥಿಗಳು ನಿರಾಸೆ ಅನುಭವಿಸಿದ್ದಾರೆ.
ಮತ್ತೊಂದೆಡೆ, ವಿವಿಯ ಎಂಯು ಲಿಂಕ್ಸ್ ಮೂಲಕ ಕಾಲೇಜಿನ ಮುಖ್ಯಸ್ಥರು ಕೆಲವು ಪದವಿಯ ಫಲಿತಾಂಶವನ್ನು ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಈ ನಡುವೆ ಮಂಗಳೂರು ವಿವಿಯಿಂದ ಫಲಿತಾಂಶ ಮುಂದೂಡಲಾಗಿದೆ ಎಂಬ ನಕಲಿ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ನಡೆದಿದೆ.
ಫಲಿತಾಂಶ ಮುಂದೂಡಿಕೆಯ ಬಳಿಕ, ವೆಬ್‌ಸೈಟ್‌ನಲ್ಲಿ ಮಂಗಳವಾರ ಫಲಿತಾಂಶ ವೀಕ್ಷಿಸಲು ಲಭ್ಯವಿದೆ ಎಂದು ಮಂಗಳೂರು ವಿವಿ ಘೋಷಿಸಿತ್ತು. ಆದರೆ, ಆತಂಕಗೊಂಡ ವಿದ್ಯಾರ್ಥಿಗಳು ವಿವಿ ವೆಬ್‍ಸೈಟ್ ತೆರೆದಾಗ, ಈ ಪುಟ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಸೈಟ್ ತಲುಪಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ತೋರಿಸಿದೆ. ಆದರೆ ಹಿಂದನ ಫಲಿತಾಂಶಗಳು ಲಭ್ಯವಿದ್ದವು.
ಇಡೀ ದಿನ ವೆಬ್‌ಸೈಟನ್ನು ಪರಿಶೀಲಿಸಿದ್ದರೂ ಯಾವುದೇ ಫಲಿತಾಂಶ ಸಿಗಲಿಲ್ಲ. ಹಾಲ್ ಟಿಕೆಟ್ ಇಲ್ಲದೆ ಪರೀಕ್ಷೆ ಬರೆಯಬೇಕಾಗಿ ಬಂದಿತ್ತು. ಪರೀಕ್ಷೆಗಳನ್ನು ಹೆಚ್ಚು ಕಾಲ ನಡೆಸಿದರೂ ಸ್ವಷ್ಟವಾದ ಫಲಿತಾಂಶ ಪ್ರಕಟಿಸುವ ಕೆಲಸವನ್ನು ವಿವಿ ಮಾಡಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಮಂಗಳೂರು ವಿವಿ ಪರೀಕ್ಷಾ ವಿಭಾಗದ ಕುಲಸಚಿವ ಡಾ.ಪಿ.ಎಲ್.ಧರ್ಮ, ಮಂಗಳವಾರ ಭಾರಿ ದಟ್ಟಣೆಯಿಂದಾಗಿ ವೆಬ್‍ಸೈಟ್ ಕ್ರಾಶ್ ಆಗಿತ್ತು. ಇದರ ನಡುವೆ ಎಂಯು ಲಿಂಕ್ಸ್ ಮೂಲಕ ವಿದ್ಯಾರ್ಥಿಗಳ ಫಲಿತಾಂಶವನ್ನು ನೋಡುವ ಅವಕಾಶವನ್ನು ಕಾಲೇಜಿನ ಮುಖ್ಯಸ್ಥರಿಗೆ ನೀಡಲಾಗಿತ್ತು. ಎಂಯು ಲಿಂಕ್ಸ್ ಬಳಿಕ ವಿವಿ ವೆಬ್‍ಸೈಟ್‍ಗೆ ಅಂಕಗಳನ್ನು ನೀಡುವ ಕೆಲಸ ಮಾಡಲಾಗಿದೆ ಎಂದು ಹೇಳಿದ್ದಾರೆ.